ಮಹಾಲಿಂಗಪುರ: ಪುರಸಭೆಯಲ್ಲಿ ೨೦೨೬-೨೭ ನೇ ಸಾಲಿನ ಸಾರ್ವಜನಿಕ ಬಜೇಟ್ ಪೂರ್ವ ಸಾಮಾನ್ಯ ಸಭೆಯು ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ಅನುಪಸ್ಥಿತಿಯಲ್ಲಿ ಮುಖ್ಯಾಧಿಕಾರಿ ನಾಮದೇವ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮುಂಜಾನೆ ನಡೆಯಿತು.
ಈ ಸಭೆಯಲ್ಲಿ ಊರಿನ ಪ್ರಮುಖರು ಉಪಸ್ಥಿತರಿದ್ದು ಗುಣಾತ್ಮಕ ಸಲಹೆ ಸೂಚನೆಗಳನ್ನು ನೀಡಿದರು.ಇವರಿಂದ ೨೩ ವಾರ್ಡ್ ಗಳಲ್ಲಿಯ ನ್ಯೂನತೆಗಳು ಮತ್ತು ಒಟ್ಟಾರೆ ಪಟ್ಟಣದ ಅಭಿವೃದ್ಧಿಯ ಕುರಿತಾಗಿಯೂ ಬಿಸಿ ಬಿಸಿ ಚರ್ಚೆಗಳು ನಡೆದವು.
ಸಾರ್ವಜನಿಕರಿಂದ ಬಂದ ಸಲಹೆ ಸೂಚನೆಗಳನ್ನು ಅಧಿಕಾರಿಗಳು ಸ್ವೀಕರಿಸಿ ಅದರನ್ವಯ ಮುಂದಿನ ಸಭೆಯಲ್ಲಿ ಚರ್ಚೆ ನಡೆಸಿ ಮೇಲಾಧಿಕಾರಿಗಳಿಂದ ಒಪ್ಪಿಗೆ ಪಡೆದು ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂದು ಸಭೆಗೆ ತಿಳಿಸಿದರು.
ಸಾರ್ವಜನಿಕರ ಅಹವಾಲುಗಳು : ತಾಲೂಕಿಗಾಗಿ ಪ್ರಸ್ತಾವನೆ ಕುರಿತು ಚರ್ಚೆ, ಸೈನಿಕ ಸ್ಮಾರಕಕ್ಕೆ ಜಾಗೆ ಮತ್ತು ಮಾಜಿ ಸೈನಿಕರಿಗೆ ಸಭಾಭವನ, ಪುರ ಉದ್ಯಾನವನಗಳ ದುರುಸ್ಥಿ ಮತ್ತು ಇಲ್ಲಿ ಆಸನಗಳು, ಮಕ್ಕಳ ಆಟಕೆ ಸಾಮಾನುಗಳ ಅಳವಡಿಕೆ, ಪಟ್ಟಣದಲ್ಲಿ ಸ್ವಿಮ್ಮಿಂಗ್ ಪೂಲ್, ಪ್ರಮುಖ ರಸ್ತೆಗಳಲ್ಲಿ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಾಣ, ಗಡಾದ ಗಲ್ಲಿ ನೀರಿನ ಟ್ಯಾಂಕ್ ಮತ್ತು ಬಂದ್ ಬೋರವೆಲ್ ಗಳ ದುರುಸ್ಥಿ, ನೀರು ಪೋಲು ತಡೆ, ೨೪-೭ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತಾಯ, ಪಟ್ಟಣದ ಹಳೆ ಪೈಪ್ ಲೈನ್ ಬದಲಿಗೆ ಹೊಸ ಪೈಪ್ ಲೈನ್ ಅಳವಡಿಕೆ, ಹೊಸ ಚರಂಡಿಗಳ ನಿರ್ಮಾಣ, ಸ್ವಚ್ಛತೆ, ಅಲ್ಲಲ್ಲಿ ಶೌಚಾಲಯಗಳು ಮತ್ತು ಸಿಡಿಗಳ ನಿರ್ಮಾಣ, ಹೊಸ ಬಿಲ್ಡಿಂಗ್ ಗಳ ನಿರ್ಮಾಣ ಸಮಯದಲ್ಲಿ ಅವರ ಜಾಗೆಯಲ್ಲಿಯೇ ಪಾಕಿಂಗ್ ವ್ಯವಸ್ಥೆ ಮಾಡಿಟ್ಟುಕೊಳ್ಳಲು ಪುರಸಭೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು,ಹಿಂದೂ ರುದ್ರ ಭೂಮಿಯಲ್ಲಿ ಶಿವನ ಮೂರ್ತಿ,ಕಾಂಪೌಂಡ್, ಗೇಟ್ ನಿರ್ಮಾಣ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಆಗ್ರಹ, ವಿಕಲಚೇತನರಿಗೆ ಸಭಾ ಭವನ,ಸಿಧ್ಧಾಯಿ ಕೆರೆ ಜಾಗೆಯಲ್ಲಿ ವಿಹಾರಿ ಪಥ, ಕೂಡ್ರಲು ಆಸನ, ಲೈಟ್ ಅಳವಡಿಕೆಗೆ ಒತ್ತಾಯ, ಹಸಿ ಕಸ ಒಣ ಕಸ ವಿಲೇವಾರಿ ವಾಹನ ಕೊರತೆ ನೀಗಿಸಲು ಕ್ರಮ, ನಿರ್ಗತಿಕರಿಗೆ ವಸತಿ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಚರ್ಚೆ ಮುನ್ನೆಲೆಗೆ ಬಂದವು, ಸಾಮಾನ್ಯರಿಂದ ಬಂದ ಎಲ್ಲ ಸಲಹೆ ಸೂಚನೆಗಳನ್ನು ಮುಖ್ಯಾಧಿಕಾರಿಗಳು ಸಮಾಧಾನ ಚಿತ್ತದಿಂದ ಆಲಿಸಿ ಪರಿಹಾರಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶೇಖರ ಅಂಗಡಿ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ನಿಂಗಪ್ಪ ಬಾಳಿಕಾಯಿ, ರವಿ ಜವಳಗಿ, ಶಿವಾನಂದ ಟಿರಕಿ, ಸಿದ್ದು ಶಿರೋಳ, ಮುರಗೋಡ, ರಾಜು ಮಿರ್ಜಿ, ಬಾಣಕಾರ, ಕಂದಾಯ ಅಧಿಕಾರಿ ಪಿ.ವಾಯ್.ಸೊನ್ನದ, ಕಿ.ಆ.ನಿ ಮನೋಜ ಹಂಚಾಟೆ ಮುಂತಾದವರಿದ್ದರು.ದ್ವಿ.ಸ.ಅ.ಎಂ. ಎಸ್. ಮುಲ್ಲಾ, ಕಚೇರಿ ವ್ಯವಸ್ಥಾಪಕರಾದ ಎಸ್.ಎನ್.ಪಾಟೀಲ್ ನಿರೂಪಿಸಿ, ಲೆಕ್ಕಾಧಿಕಾರಿ ಆರ್.ಬಿ.ಸೋರಗಾವಿ ಸ್ವಾಗತಿಸಿ, ಹಿ.ಆ.ನಿ ಎಂ. ಎಂ.ಮುಗಳಖೋಡ ವಂದಿಸಿದರು.


