ನಾಗರಹಾಳು: ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರ ಪುಣ್ಯಸಂಸ್ಮರಣೋತ್ಸವ

Hasiru Kranti
ನಾಗರಹಾಳು: ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರ ಪುಣ್ಯಸಂಸ್ಮರಣೋತ್ಸವ
WhatsApp Group Join Now
Telegram Group Join Now
ಸಿರುಗುಪ್ಪ09..: ‘ಅಖಂಡ ಬಳ್ಳಾರಿ ಜಿಲ್ಲೆಯ ವೀರಶೈವ ವಿದ್ಯಾವರ್ಧಕ ಸಂಘದ ಆರಂಭಕ್ಕೆ ಉಜ್ಜಯಿನಿ ಜಗದ್ಗುರು ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರು ಮೂಲ ನಿಧಿಯಾಗಿ ಐದು ಸಹಸ್ರ ರೂಪಾಯಿಗಳನ್ನಿತ್ತು ಹಾರೈಸಿದ್ದರು’ ಎಂದು ಸಿರುಗುಪ್ಪ ನಗರದ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ ಸ್ಮರಿಸಿದರು.
ತಾಲ್ಲೂಕಿನ ನಾಗರಹಾಳು ಬೃಹನ್ಮಠದಲ್ಲಿ ಬುಧವಾರ ಆಯೋಜಿಸಿದ್ದ ಉಜ್ಜಯಿನಿ ಜಗದ್ಗುರು ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯರ 90ನೇ ಪುಣ್ಯಸಂಸ್ಮರಣೋತ್ಸವ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
‘ಸಂಘ ಹಲವು ಶಾಲಾ, ಕಾಲೇಜು, ವಿದ್ಯಾಲಯಗಳನ್ನು ಸ್ಥಾಪಿಸಿ ಇಂದು ಹೆಮ್ಮರವಾಗಿ ಬೆಳೆದಿದ್ದು, ಆ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸುವಲ್ಲಿ ನಿರತವಾಗಿದೆ’ ಎಂದರು.
ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯ ಮಾತನಾಡಿ, ಸನಾತನ ಸಂಸ್ಕೃತಿಯಲ್ಲಿ ಗುರು-ಹಿರಿಯರನ್ನು, ಪ್ರಾಜ್ಞರನ್ನು ಗೌರವಿಸುವ ಪರಂಪರೆ ಉದಾತ್ತವಾಗಿ ಬೆಳೆದು ಬಂದಿದೆ. ಎಲ್ಲರಿಗಿಂತ ಕಿರಿಯ ನಾನೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ನೆಲೆಗೊಂಡಾಗ, ಅಹಂ ನಾಶಗೊಂಡು ಭಗವಂತನನ್ನು ಕಾಣಲು ಸಾಧ್ಯವಾಗುತ್ತದೆ. ಜೀವನದಲ್ಲಿ ಧನಾತ್ಮಕ ಚಿಂತನೆಗಳು ಬೆಳೆದಷ್ಟು ಸತ್ಕರ್ಮಗಳು ಹೆಚ್ಚಿ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಿದರು.
ನಾ.ಮ. ಜಗದೀಶ ಗವಾಯಿಗಳ ವಚನ ಗಾಯನಕ್ಕೆ ಅಂಬಣ್ಣ ತಬಲಸಾಥ್ ನೀಡಿದರು. ಇದಕ್ಕು ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೃಹನ್ಮಠದ ನಾ.ಮ. ಬಸವರಾಜತಾತ ಅವರ 90ನೇ ಜನ್ಮದಿನ ಅಂಗವಾಗಿ ಭಕ್ತರು ಸತ್ಕರಿಸಿದರು.
ಶ್ರೀಮಠದ ಪ್ರಮುಖರಾದ ಎನ್.ಎಂ. ಶ್ರೀಕಂಠಯ್ಯತಾತ, ನಿವೃತ್ತ ವೈದ್ಯ ಮಲ್ಲಿಕಾರ್ಜುನ ಸ್ವಾಮಿ, ಕಲಿಗಣನಾಥ, ನಾಗರಹಾಳು ಚಂದ್ರಗೌಡ, ಗಿರೀಶಗೌಡ, ಬಿ.ಎಂ ಸೂಗೂರು ಚಂದ್ರಶೇಖರ, ಕುಂಟನಹಾಳು ಮಂಜುನಾಥಗೌಡ, ಶಿವಕುಮಾರ, ಸಿರುಗುಪ್ಪ ಜಂಗಮ ಸಂಘದ ಮಹಾಂತೇಶ ಹಳೇಕೋಟೆ ಸೇರಿದಂತೆ ಭಕ್ತರು ಹಾಜರಿದ್ದರು.
ಬಳಿಕ ಅನ್ನಸಂತರ್ಪಣೆ ಜರುಗಿತು.
WhatsApp Group Join Now
Telegram Group Join Now
Share This Article