ರೋಣ ,ಏಪ್ರಿಲ್ 10: ಸಂವಿಧಾನ ಬದ್ಧವಾಗಿ ಮತದಾನದ ಹಕ್ಕನ್ನು ಭಾರತದ ಪೌರರಾದ ನಾವೆಲ್ಲರೂ ಪಡದಿದ್ದೇವೆ, ಮತ ಚಲಾಯಿಸುವ ಮೂಲಕ ನೀವು ನಿಮ್ಮ ಅಭಿವೃದ್ಧಿ, ಗ್ರಾಮದ ಅಭಿವೃದ್ಧಿ, ದೇಶದ ಅಭಿವೃದ್ಧಿ ಮಾಡಲು ಸಾಧ್ಯ ಹಾಗಾಗಿ ಅದನ್ನು ಲಘುವಾಗಿ ಪರಿಗಣಿಸದೆ ತಪ್ಪದೆ ಮತದಾನ ಮಾಡಿ ಎಂದು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ಹೇಳಿದರು..
ರೋಣ ತಾಲೂಕಿನ ಚಿಕ್ಕಮಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಸಲಾಪೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಕಡ್ಡಾಯ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹಿರಿಯರನ್ನು ಗೌರವಿಸಬಹುದು ಮತ್ತು ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ ಆಗಿದೆ ಅಂದರು..
ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಆಮಿಷಕ್ಕೆ ಒಳಗಾಗಬೇಡಿ ಉತ್ತಮ ನಾಳೆಗಳು ಬೇಕಾದರೆ ಮತದಾನ ಮಾಡುವ ಮೂಲಕ ಎಲ್ಲಾ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾರ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢ ಗೊಳಿಸಿ ಎಂದರು. ಕಳೆದ ಬಾರಿ ರೋಣ ತಾಲೂಕಿನಲ್ಲಿ ಶೇ 69% ಮತದಾನ ಪ್ರಮಾಣ ಆಗಿದೆ, ಈ ಬಾರಿ ನೂರಕ್ಕೆ ನೂರರಷ್ಟು ಮಾಡುವ ಗುರಿಯನ್ನು ಹೊಂದಿದ್ದೇವೆ, ನಿಮ್ಮ ಗ್ರಾಮದಲ್ಲಿ 800 ಕ್ಕೂ ಹೆಚ್ಚು ಮತಗಳು ಇವೆ ಯಾವುದೇ ಕಾರಣಕ್ಕೂ ಯಾರು ಮತದಾನದಿಂದ ದೂರ ಉಳಿಯಬೇಡಿ ಎಂದರು..
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಶೀದ್ ಹುಣಸಿಮರದ ಮತಾನಾಡಿ ನರೇಗಾ ದಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ದಿನವೊಂದಕ್ಕೆ 349 ರೂಪಾಯಿ ನೀಡಲಾಗುತ್ತದೆ. ಬೇಸಿಗೆಯ ಅವಧಿಯಲ್ಲಿ ಬಡ ಜನರಿಗೆ ಅವರ ಮಕ್ಕಳಿಗೆ ಫೀ ತುಂಬಲು ನರೇಗಾ ಯೋಜನೆ ಅನುಕೂಲಕರ ವಾಗಿದೆ, ಅಲ್ಲದೇ ಈ ಹಣವನ್ನು ಕೂಲಿಕಾರರು ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳ ಬಳಕೆಗೆ ಸಹಾಯವಾಗುತ್ತದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕಮಣ್ಣೂರ ಗ್ರಾಮ ಪಂಚಾಯತಿ ಬಿ.ಎಪ್.ಟಿ. ಈರಣ್ಣ ಬೇಲೆರಿ ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿಗಳು,ನರೇಗಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು….