ನಂಬಿಕೆ ಕಳೆದುಕೊಂಡಾಗ ನಮಗೆ ದೇವರ ನೆನಪಾಗುತ್ತದೆ ದೇವರು ನನ್ನ ಜೀವನದಲ್ಲಿ ಎಷ್ಟೆಲ್ಲ ಆಟ ಆಡಿದನಲ್ಲ ಎನಿಸಬಹುದು. ಆಗೆಲ್ಲ ನಾವು ‘ದೇವನೊಬ್ಬ ಜಾದೂಗಾರ’ ಎಂದುಕೊಳ್ಳುತ್ತೇವೆ. ಈಗ ಖಟ್ವಾಂಗ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಇದೇ ಹೆಸರನ್ನಿಟ್ಟು ಸಿನಿಮಾ ಒಂದು ಬರುತ್ತಿದೆ. ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಶೆಟ್ಟಿ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ದೊಡ್ಡ ತಾರಾಬಳಗವಿರೋ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಕನ್ನಡದ ಹೆಸರಾಂತ ನಟಿ ಶ್ವೇತಾ ಶ್ರೀವಾಸ್ತವ್ ‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ ಮಾಡಿದರು. ನಿರ್ದೇಶಕ ಸಿಂಪಲ್ ಸುನಿ ಮತ್ತು ಬಿಗ್ ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.
“ನಿರ್ದೇಶಕ ವರುಣ್ ವಸಿಷ್ಠ ಅವರಿಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾ ದಿನದಿಂದ ನನಗೆ ವರುಣ್ ಪರಿಚಯ ಇದೆ. ಅಂದಿನಿಂದ ಅವರಿಗೆ ದೊಡ್ಡ ಸಿನಿಮಾ ನಿರ್ದೇಶನ ಮಾಡುವ ಕನಸಿತ್ತು ಅದು ನಿಜವಾಗಿದೆ. ಚಿತ್ರ ಉತ್ತಮವಾಗಿ ಹೆಸರು ತರಲಿ, ಭವಿಷ್ಯದಲ್ಲಿ ಮತ್ತಷ್ಟು ಒಳ್ಳೆಯ ಚಿತ್ರಗಳು ಈ ಬ್ಯಾನರ್ ನಲ್ಲಿ ಬರಲಿ” ಎಂದು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ಮಾಪಕ ಬಾಲಕೃಷ್ಣ ಶೆಟ್ಟಿ “ನಾನು ಹಲವಾರು ವರ್ಷಗಳಿಂದ ವಿದೇಶದಲ್ಲಿ ಇದ್ದರೂ ನಾನು ಅಲ್ಲಿ ಕನ್ನಡ ಸಂಘ ಮಾಡಿದೆ. ಅನಿವಾಸಿ ಭಾರತೀಯರಿಗೆ ಮೊದಲ ಎನ್.ಆರ್.ಐ. ಸಂಘ ಕಟ್ಟಿದ್ದು ನಾನು. ಹಾಗೆ ನನಗೆ ಕನ್ನಡ ಎಂದರೆ ಬಹಳ ಅಭಿಮಾನ ಅಂತಹ ಸಮಯದಲ್ಲಿ ವರುಣ್ ನನ್ನ ಬಳಿ ಬಂದು ಕಥೆ ಹೇಳಿದರು. ನನ್ನ ಮಗನಿಗೆ ಚಿತ್ರನಟನಾಗಬೇಕು ಎಂದು ಬಾಲ್ಯದಿಂದಲೇ ಆಸೆ ಇತ್ತು. ಅಂತಹ ಸಮಯದಲ್ಲಿ ನನ್ನ ಮಗನನ್ನು ನಾಯಕನೆಂದು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶಕ ವರುಣ್ ಕಥೆ ಹೇಳಿದ್ದಾರೆ.ಇದು ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ತಂಡದ ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈಗ ಮಾಧ್ಯಮ ಮಿತ್ರರು ಈ ಸಿನಿಮಾಗೆ ಬೆಂಬಲ ಕೊಡಬೇಕು”ಎಂದು ಮನವಿ ಮಾಡಿದರು.

ನಿರ್ದೇಶಕ ವರುಣ್ ” ನಾನು ಕಾಲೇಜು ದಿನಗಳಿಂದಲೂ ಶಾರ್ಟ್ ಮೂವಿ ಮಾಡಿಕೊಂಡು ಬಂದಿದ್ದೇನೆ. ಒಮ್ಮೆ ಫೇಸ್ ಬುಕ್ ನಲ್ಲಿ ಸಚಿನ್ ಅವರ ಪರಿಚಯವಾಯಿತು. ಅದೇ ಮುಂದೆ ಉಡುಪಿಗೆ ಹೋದಾಗ ಅವರನ್ನು ಭೇಟಿ ಮಾಡಿದೆ. ಆಗ ನನಗೆ ಅವರಲ್ಲೊಬ್ಬ ನಟ ಇದ್ದಾನೆ ಎಂದು ಗೊತ್ತಿರಲಿಲ್ಲ ಆದರೆ ಅವರು ಮುಂದಿನ ದಿನಗಳಲ್ಲಿ ದೊಡ್ಡ ಕಲಾವಿದರಾಗುವ ಎಲ್ಲಾ ಲಕ್ಷಣಗಳ ತೋರಿಸಿದ್ದಾರೆ. ಇನ್ನು ಸುಧಾ ಬೆಳವಾಡಿ ಪ್ರಮುಖ ಪಾತ್ರ ಒಂದನ್ನು ನಿರ್ವಹಿಸಿದ್ದಾರೆ. ಇಲ್ಲಿ ಪ್ರತಿ ನಟರು ಇನ್ನೊಬ್ಬರಿಗೆ ಕಾಂಪೀಟ್ ಮಾಡುವ ರೀತಿಯಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಪ್ರತಿಯೊಬ್ಬ ನಟರ ಮೇಲೆ ಕಥೆ ಸಾಗುತ್ತದೆ” ಎಂದು ಹೇಳಿದರು.
“ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು ದೇವ ಎನ್ನುವ ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇದು ಕ್ರೈಂ ಥ್ರಿಲ್ಲರ್ ಕಥೆ. ಅವನ ಜೀವನದಲ್ಲಿ ನಡೆಯುವ ಕಲ್ಪನಾತೀತ ಘಟನೆಗಳು ಜೊತೆಗೆ ಓರ್ವ ಮಂಗಳಮುಖಿ ಪಾತ್ರ ಸಹ ಚಿತ್ರದಲ್ಲಿದೆ.ಪ್ರತಿಯೊಬ್ಬ ಜೀವನದಲ್ಲಿ ದೇವರ ಲೆಕ್ಕಾಚಾರ ಒಂದಾಗಿರುತ್ತದೆ. ಹಾಗಾಗಿ ‘ದೇವನೊಬ್ಬ ಜಾದೂಗಾರ’ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ. ಕಾಶಿಪುರದಲ್ಲಿರುವ ಇಬ್ಬರು ಪ್ರಮುಖ ವ್ಯಕ್ತಿಗಳು ದೇವನ ಮೇಲೆ ಬೀರಿದ ಪ್ರಭಾವ ಅದರಿಂದ ದೇವನ ಜೀವನ ಬದಲಾಗುವ ರೀತಿ ಅಂತಿಮವಾಗಿ ದೇವ ಏನಾಗುತ್ತಾನೆ ಎನ್ನುವುದು ಚಿತ್ರದಲ್ಲಿ ಹೇಳುತ್ತಿದ್ದೇನೆ. ಶೂಟಿಂಗ್ ನಾಲ್ಕು ವರ್ಷಗಳಿಂದ ನಡೆದಿದೆ. ಸಚಿನ್ ಹಾಗೂ ನಿರ್ಮಾಪಕರು ಭಾರತಕ್ಕೆ ಬಂದಾಗ ಮಾತ್ರ ಶೂಟಿಂಗ್ ಮಾಡಲಾಗಿದೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ತೆರೆಗೆ ತರಲು ಯೋಜಿಸಿದ್ದೇವೆ” ಎಂದು ನಿರ್ದೇಶಕ ವರುಣ್ ಮಾಹಿತಿ ನೀಡಿದರು.
ನಾಯಕ ನಟ ಸಚಿನ್ “ನಾನು ವರುಣ್ ಫೇಸ್ ಬುಕ್ ನಲ್ಲಿ ಸ್ಹೇಹಿತರಾದವರು. ನನಗೆ ಅಭಿನಯಿಸುವ ಆಸೆ ಇದ್ದರೂ ಸರಿಯಾಗಿ ಅವಕಾಶ ಸಿಕ್ಕಲಿಲ್ಲ ಆಗ ಪ್ರತಿಭಾವಂತರಾದ ವರುಣ್ ಬೆಳೆಯಲಿ ಎಂದು ಅವನಿಗೆ ನೆರವಾದೆ. ಊರಿಗೆ ಬಂದಾಗ ನಾನು ಅವನೊಂದಿಗೆ ಸೇರಿ ಶಾರ್ಟ್ ಮೂವಿ ಮಾಡಿದೆ. ಆಗ ನನ್ನ ರಾ ಲುಕ್ ನೋಡಿ ಈ ಕಥೆ ಹೇಳಿದ್ದ . ಈಗ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಹರಿಸಿ’ ಎಂದು ಕೇಳಿಕೊಂಡರು.
ನಾಯಕಿ ಪ್ರಿಯಾ ಜೆ. ಆಚಾರ್ “ನನ್ನದು ಇದರಲ್ಲಿ ವಿಶೇಷ ಪಾತ್ರ. ಆದರೆ ಈಗಲೇ ಪಾತ್ರದ ಬಗ್ಗೆ ಏನು ಹೇಳಲಾಗದು” ಎಂದರು.
ಮುಖ್ಯಮಂತ್ರಿ ಪಾತ್ರ ನಿರ್ವಹಿಸಿರುವ ಸುಧಾ ಬೆಳವಾಡಿ “ಟೈಟಲ್ ನೋಡಿ ಸಿನಿಮಾ ನೋಡಬೇಕು ಎನಿಸೋ ಚಿತ್ರ ಇದಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಬಹಳಷ್ಟು ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಸೌದಿ ಅರೇಬಿಯಾದಿಂದ ಬಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ ಇದಕ್ಕೆ ಬೆಂಬಲ ನೀಡಬೇಕು. ” ಎಂದರು.
ಲಹರಿ ಸಂಸ್ಥೆಯ ಸೋದರ ಸಂಸ್ಥೆ ಎಂ.ಆರ್.ಟಿ. ಸಂಸ್ಥೆ ಯೂಟ್ಯೂಬ್ ಚಾನೆಲ್ ನಲ್ಲಿ ‘ದೇವರೊಬ್ಬ ಜಾದೂಗಾರ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.


