ಹೋರಾಟಗಾರರ ಬಂಧನ ಖಂಡಸಿ ಪ್ರತಿಭಟನೆ

Hasiru Kranti
ಹೋರಾಟಗಾರರ ಬಂಧನ ಖಂಡಸಿ ಪ್ರತಿಭಟನೆ
WhatsApp Group Join Now
Telegram Group Join Now
ಬಳ್ಳಾರಿ,ಜ.೦5..ಎಸ್‌ಕೆಎಂ ಮತ್ತು ಎಐಕೆಕೆಎಂಎಸ್ ನಾಯಕ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು  ವಿರೋಧಿಸಿ ನಗರದ ವಡ್ಡರಬಂಡೆ ಬಳಿ ಎಐಕೆಕೆಎಂಎಸ್, ಎಐಡಿಎಸ್‌ಓ, ಎಐಡಿವೈಓ ಮತ್ತು  ಎಐಎಂಎಸ್‌ಎಸ್ ಸಂಘಟನೆಗಳಿಂದ ಜಂಟಿಯಾಗಿ  ಪ್ರತಿಭಟನೆ ನಡೆಸಿತು.
ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡುತ್ತಾ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಅಖಿಲ ಭಾರತ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ   ಭಗವಾನ್ ರೆಡ್ಡಿ ಅವರ ಮತ್ತು ಇತರ ನಾಯಕರ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇವೆ.ಭಗವಾನ್ ರೆಡ್ಡಿ ಅವರು ವಿಜಯಪುರ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಮತ್ತು ಕೋರ್ ಕಮಿಟಿ ಸದಸ್ಯರಾಗಿದ್ದು, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟಿರುವ (ಸಾರ್ವಜನಿಕ, ಖಾಸಗಿ, ಸಹಭಾಗಿತ್ವ) ಮಾದರಿಯನ್ನು ವಿರೋಧಿಸುವ ದೀರ್ಘಕಾಲೀನ ಜನಾಂದೋಲನವನ್ನು ಮುನ್ನಡೆಸುತ್ತಿರುವ ಪ್ರಮುಖ ನಾಯಕರಾಗಿದ್ದಾರೆ.
ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಯುತ್ತಿತ್ತು. ಈ ಚಳವಳಿಗೆ ವಿಜಯಪುರ ಜಿಲ್ಲೆಯದಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು. ಮೊನ್ನೆ, ವಿಜಯಪುರದ ಉಸ್ತುವಾರಿ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಕಾಮ್ರೇಡ್ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದರು.
ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗಧೀಶ ನೇಮಕಲ್ಲು ಮಾತನಾಡುತ್ತಾ, ಭಾರತೀಯ ನ್ಯಾಯ ಸಂಹಿತೆ ೧೮೯/೨, ೩೫೧/೨, ೧೯೦, ೧೦೯/೧, ೨೯೨, ೧೩೨, ೧೨೧/೧ ಸೇರಿದಂತೆ  ಗಂಭೀರ ಹಾಗೂ ಜಾಮೀನುರಹಿತ ಸೆಕ್ಷನ್‌ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಕುಗ್ಗಿಸಲು ಸರ್ಕಾರ ಕೈಗೊಂಡಿರುವ ಇದು ಅತ್ಯಂತ ಹೀನ ಮತ್ತು ಅಧಿಕಾರಶಾಹಿ ಕ್ರಮವಾಗಿದೆ ಎಂದರು.
ಎಐಎಂಎಸ್‌ಎಸ್ ಜಿಲ್ಲಾ ಸಮಿತಿ ಸದಸ್ಯರಾದ ವಿದ್ಯಾ ಮಾತನಾಡುತ್ತಾ, ಜನರನ್ನು ಭಯಭೀತಗೊಳಿಸಿ ಹೋರಾಟ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನಗಳ ಉದ್ದೇಶವಾಗಿದೆ. ಭಗವಾನ್ ರೆಡ್ಡಿ ಅವರು ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಹಲವು ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದು, ಖಾಸಗೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಸದಾ ಹೋರಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕರನ್ನು ಗುರಿಯಾಗಿಸುವುದು ಸರ್ಕಾರದ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಧೋರಣೆಯನ್ನು ಬಹಿರಂಗಪಡಿಸುತ್ತದೆ ಇದನ್ನು ನಾವು ಖಂಡಿಸುತ್ತೇವೆ ಮತ್ತು ಇದರ ವಿರುದ್ಧ ಬಲಿಷ್ಠ ಚಳುವಳಿ ಬೆಳೆಸುತ್ತೇವೆ ಎಂದರು.
ಎಐಡಿಎಸ್‌ಓ ವಿದ್ಯಾರ್ಥಿ ಸಂಘದ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್ ಮಾತನಾಡುತ್ತಾ, ಜನಪರ ಹೋರಾಟಗಾರರನ್ನು ಬಂಧಿಸುವ ಇಂತಹ ದಮನಾತ್ಮಕ ಕ್ರಮವನ್ನು ತೀವ್ರವಾಗಿ ಖಂಡಿಸಿ, ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಬರೀ ಸಂವಿಧಾನ ಬಗ್ಗೆ ಭಾಷಣ ಮಾಡುವ ಕಾಂಗ್ರೇಸ್ ಬಹಿರಂಗವಾಗಿ ಇಂದು ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿದೆ,  ಕಾಮ್ರೇಡ್ ಭಗವಾನ್ ರೆಡ್ಡಿ ಸೇರಿದಂತೆ ಬಂಧಿತಗೊAಡಿರುವ ಎಲ್ಲಾ ನಾಯಕರು ಹಾಗೂ ಹಲವಾರು ಮಹಿಳಾ ಕಾರ್ಯಕರ್ತರನ್ನು ತಕ್ಷಣ ಮತ್ತು ಷರತ್ತುರಹಿತವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಎಐಕೆಕೆಎAಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರದ ಇಂತಹ ದಮನದಿಂದ ಜನರ ಹೋರಾಟದ ದೃಢನಿಶ್ಚಯ ಇನ್ನಷ್ಟು ಬಲಗೊಳ್ಳಲಿದೆ ಹಾಗೂ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ.
ಕಾಮ್ರೇಡ್ ಭಗವಾನ್ ರೆಡ್ಡಿ ಹಾಗೂ ರೈತ, ಹಾಗೂ Sಏಒ ನಾಯಕರು ಹಾಗೂ ಇನ್ನಿತರರ ಬಿಡುಗಡೆಗಾಗಿ ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಗೆ ನಮ್ಮ ಸಂಘಟನೆಗಳು ಕರೆ ನೀಡಿವೆ ಎಂದರು
ಈ ಸಂದರ್ಭದಲ್ಲಿ  ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್,  ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಜಂಟಿ ಕಾರ್ಯದರ್ಶಿ ಸೌಮ್ಯ, ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಈರಣ್ಣ,  ಉಪಾಧ್ಯಕ್ಷೆ ಶಾಂತಿ, ಇತರ ಸಂಘಗಳ ಸದಸ್ಯರಾದ ಗಿರಿಜಾ,  ತಿಪ್ಪೇಸ್ವಾಮಿ, ಕಾಂತೇಶ್, ರಾಮಾಂಜಿನಿ ಸೇರಿದಂತೆ ಇತರರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article