ನವದೆಹಲಿ,ಏಪ್ರಿಲ್10: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ತಮ್ಮನ್ನು ಬಂಧಿಸಿದ ಕ್ರಮ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಹಿಂದೆ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ನ್ಯಾಯಾಲಯ ನಿನ್ನೆ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆದು ಎಎಪಿ ಕಾನೂನು ವಕೀಲ ಸೆಲ್, ಸಂಜೀವ್ ನಾಸಿಯಾರ್ ಅವರು ಹೇಳಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸುಪ್ರೀಂಕೋರ್ಟ್ ತೆರಳಿದ್ದಾರೆ. ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.ಕೇಜ್ರಿವಾಲ್ ಅವರ ಮನವಿಯನ್ನು ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಮುಖ್ಯ ನ್ಯಾಯಮೂರ್ತಿ ಪೀಠದ ಮುಂದೆ ವಿಚಾರಣೆಗಾಗಿ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದು ನಾಸಿಯಾರ್ ಹೇಳಿದ್ದಾರೆ.
2021ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಲಯವು ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ನೀಡಿತ್ತು. ಈ ಅದೇಶದ ವಿರುದ್ಧ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.