ಬಳ್ಳಾರಿ : 02..ಇಂದು ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಲಹೆಯ ಮೇರೆಗೆ ಮುಂದೂಡಲಾಗಿದೆ ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುಷ್ಟ ಬಿಜೆಪಿ ನಾಯಕರು ವಿನಾಕಾರಣವಾಗಿ ವಿಜೃಂಭಣೆಯಿಂದ ನಡೆಯಬೇಕಿದ್ದ ಕಾರ್ಯಕ್ರಮವನ್ನು ಹಾಳು ಮಾಡುವ ಯತ್ನ ನಡೆಸಿದ್ದಾರೆ. ಪ್ರಪಂಚವೇ ಪೂಜಿಸುವ ಮಹರ್ಷಿ ವಾಲ್ಮೀಕಿ ಅಜ್ಜನವರಿಗೆ ಅವಮಾನ ಮಾಡಿರುವುದು ದುರದೃಷ್ಟಕರ. ಕೇವಲ ಮನೆ ಮುಂದೆ ಬ್ಯಾನರ್ ಹಾಕಿರುವ ಕ್ಷುಲ್ಲಕ ಕಾರಣವನ್ನು ಮುಂದಿಟ್ಟು ಈ ರೀತಿಯ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಇದು ಪೂರ್ವಯೋಜಿತ ಕೃತ್ಯವಾಗಿದ್ದು, ಕಟ್ಟಿಗೆ, ಕಲ್ಲು ಹಾಗೂ ಕೆಜಿ ಗಟ್ಟಲೆ ಕಾರದ ಪುಡಿ ಸಂಗ್ರಹಿಸಿಕೊಂಡು ಶನಿವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ತಡೆಯುವ ಉದ್ದೇಶದಿಂದಲೇ ಈ ಘಟನೆ ನಡೆಸಲಾಗಿದೆ. ವಾಲ್ಮೀಕಿ ಅಜ್ಜನ ಪ್ರತಿಮೆ ಅನಾವರಣದ ವೈಭವವನ್ನು ಸಹಿಸಲಾರದೆ ಈ ರೀತಿ ವರ್ತಿಸಿದ್ದಾರೆ ಎಂದು ಹೇಳಿದರು.
ಭರತ್ ರೆಡ್ಡಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕಪ್ಪು ಚುಕ್ಕೆ ತರುವ ಹುನ್ನಾರ ನಡೆಯುತ್ತಿದೆ. ತಪ್ಪಿತಸ್ಥರು ಯಾರು ಇದ್ದರೂ ಅವರ ವಿರುದ್ಧ ನಮ್ಮ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ನಾಯಕರ ದಬ್ಬಾಳಿಕೆ ಸರಿಯಲ್ಲ ಎಂದರು.
ಮಹರ್ಷಿ ವಾಲ್ಮೀಕಿ ಅವರಿಗೆ ಅತ್ಯುನ್ನತ ಮಟ್ಟದ ಗೌರವ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಜನಾರ್ದನ್ ರೆಡ್ಡಿಯವರು ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದುಕೊಂಡಿರುವಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ಕಾಂಗ್ರೆಸ್ ಕಾರ್ಯಕರ್ತನ ನಿಧನದ ದುಃಖ ಹಾಗೂ ಭದ್ರತಾ ದೃಷ್ಟಿಯಿಂದ ನಾಳೆ ನಡೆಯಬೇಕಿದ್ದ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಲು ಮಾನ್ಯ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. ಈ ಹಿಂದೆ ಇದ್ದ ಪುತ್ತಳಿ ಖಾಸಗಿ ಜಾಗದಲ್ಲಿದ್ದು, ಈಗ ಮಹಾನಗರ ಪಾಲಿಕೆ ವತಿಯಿಂದ ಅಧಿಕೃತವಾಗಿ ಪುತ್ತಳಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿ. ನಾಗೇಂದ್ರ ತಿಳಿಸಿದರು.
ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾವನ್ನಪ್ಪಿರುವುದು ನನಗೆ ತುಂಬಾ ನೋವು ತಂದಿದೆ. ಮೃತರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ತಿಳಿಸಿ, ವಿವಾದಾತ್ಮಕ ಬ್ಯಾನರ್ ಅನ್ನು 3–4 ದಿನಗಳ ಹಿಂದೆಯೇ ಹಾಕಲಾಗಿತ್ತು. ಈ ಬಗ್ಗೆ ಪೊಲೀಸರು ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬಹುದಿತ್ತು, ಮಹರ್ಷಿ ವಾಲ್ಮೀಕಿ ಅವರ ಫೋಟೋವನ್ನು ಕಾಲಿನಿಂದ ತುಳಿದಿರುವ ದೃಶ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಕೃತ್ಯಗಳು ಸಮಾಜದ ಶಾಂತಿಗೆ ಧಕ್ಕೆ ತರುವಂತವು. ಇವರ ಇತಿಹಾಸ ಏನು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಎಂದು ಆಕ್ರೋಶ ವ್ಯಕ್ತಪಡಿಸಿ, ಅಭಿವೃದ್ಧಿ ವಿಚಾರದಲ್ಲಿ ಹಿಂದಿನ ಆಡಳಿತದ ಸ್ಥಿತಿ ಮತ್ತು ಇಂದಿನ ಪರಿಸ್ಥಿತಿಯನ್ನು ಜನರು ತಾವೇ ಹೋಲಿಕೆ ಮಾಡಿ ನೋಡಬೇಕು ಎಂದು ಹೇಳಿದರು. ಅವರ ಬಳಿ ಮೂರು ಸಚಿವ ಸ್ಥಾನಗಳಿದ್ದರೂ ಕೂಡ ಬಳ್ಳಾರಿ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಜನರೇ ಪ್ರಶ್ನಿಸಬೇಕು ಎಂದು ಶಾಸಕ ಗಣೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಶಾಸಕ ಭರತ್ ರೆಡ್ಡಿ, ಮುಂಡ್ರಿಗಿ ನಾಗರಾಜ್, ರಾಂಪ್ರಸಾದ್, ತಿಮ್ಮನಗೌಡ, ವಿವೇಕ್ ವಿಕ್ಕಿ, ವೆಂಕಟೇಶ್ ಪ್ರಸಾದ್, ರಾಜೇಶ್ವರಿ ಸುಬ್ಬರಾಯುಡು ಸೇರಿದಂತೆ ಅನೇಕ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.


