ಬಳ್ಳಾರಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ : ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ

Hasiru Kranti
ಬಳ್ಳಾರಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ : ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ
Oplus_131072
WhatsApp Group Join Now
Telegram Group Join Now
ಬಳ್ಳಾರಿ,ಜ,02, : ಬಳ್ಳಾರಿ ನಗರದಲ್ಲಿ ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ಗುಂಡಾಗರ್ದಿ ನಡೆದಿದ್ದು, ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಬಂದು ಹಿಂಸಾತ್ಮಕ ವಾತಾವರಣ ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸತೀಶ್ ರೆಡ್ಡಿ ಎಂಬ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಫೈರ್ ಮಾಡಿಸಿದ್ದಾನೆ. ಈ ಘಟನೆಗೆ ಬಿಜೆಪಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದರು. ಗುಂಡಾಗರ್ದಿ ಮೂಲಕ ನಮ್ಮ ನಾಯಕರಾದ ಗಾಲಿ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಹಾಗೂ ಆನಂದ್ ಸಿಂಗ್ ಅವರನ್ನು ಹೆದರಿಸುವ ಯತ್ನ ನಡೆದಿದೆ. ಆದರೆ ಇದರಿಂದ ಬಿಜೆಪಿ ಕಾರ್ಯಕರ್ತರು ಧೃತಿಗೆಡಬೇಕಾದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಪುತ್ಥಳಿ ವಿಚಾರದಲ್ಲಿ ಅನಗತ್ಯ ಗಲಾಟೆ ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ಮಹರ್ಷಿ ವಾಲ್ಮೀಕಿಯನ್ನು ಪೂಜಿಸುವ ಉದ್ದೇಶದಿಂದ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಜಾ ದಿನ ಘೋಷಣೆ ಮಾಡಿದ್ದರು. ವಾಲ್ಮೀಕಿ ಭವನಕ್ಕೆ ಅನುದಾನ ನೀಡಿದ್ದು ಶ್ರೀರಾಮುಲು ಅವರೇ. 25 ವರ್ಷಗಳ ಹಿಂದೆಯೇ ಅಲ್ಲಿ ಪುತ್ಥಳಿ ಇತ್ತು. ಆದರೆ ಇವತ್ತು ರಾಜಕೀಯ ತೆವಲಿಗೆ ಬ್ಯಾನರ್‌ಗಳನ್ನು ಹಾಕಿ ಗಲಾಟೆ ಮಾಡಲಾಗಿದೆ ಎಂದು ಆರೋಪಿಸಿದರು.
ಜನಾರ್ದನ ರೆಡ್ಡಿ ಮನೆ ಮೇಲೆ ಖಾಸಗಿ ವ್ಯಕ್ತಿಗಳು ಗುಂಡು ಹಾರಿಸಿರುವುದು ಅಕ್ಷಮ್ಯ ಅಪರಾಧ. ಸಿಎಂ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತರಲು ಮುಂದಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೊದಲ ಆರೋಪಿ ಶಾಸಕ ಭರತ್ ರೆಡ್ಡಿಯೇ ಎಂದು ವಿಜಯೇಂದ್ರ ಹೇಳಿದರು. ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ ಶಾಸಕರನ್ನು ಬಂಧಿಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.
ನಿನ್ನೆ ನಡೆದ ಘಟನೆಗೆ ಸಮಗ್ರ ತನಿಖೆ ನಡೆಯಬೇಕು. ಎಸ್‌ಐಟಿ ರಚನೆ ಮಾಡಿ ತೇಪೆ ಹಚ್ಚುವ ಕೆಲಸವಾಗಬಾರದು. ಹೈಕೋರ್ಟ್‌ ನ್ಯಾಯಾಧೀಶರ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಂತಾಗಿವೆ ಎಂದು ಆರೋಪಿಸಿದ ವಿಜಯೇಂದ್ರ, ಕೂಡಲೇ ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಸಾವಿಗೂ ಅವರದೇ ಗುಂಡು ಕಾರಣವಾಗಿದ್ದು, ಖಾಸಗಿ ಗನ್‌ಮ್ಯಾನ್‌ಗಳ ಗುಂಡಿನಿಂದಲೇ ಆತ ಮೃತಪಟ್ಟಿದ್ದಾನೆ. ಇದಕ್ಕೆ ಶಾಸಕ ಭರತ್ ರೆಡ್ಡಿ ಉತ್ತರ ನೀಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕಾದರೆ ಈ ಪ್ರಕರಣದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಅನಿವಾರ್ಯ ಎಂದು ವಿಜಯೇಂದ್ರ ಹೇಳಿದರು.
WhatsApp Group Join Now
Telegram Group Join Now
Share This Article