ಬೆಳಗಾವಿ: ಕೂಡಿಟ್ಟ ಹಣ, ಒಡವೆ, ಬಂಗಾರ ಯಾರಾದರೂ ಕಳ್ಳತನ ಮಾಡಬಹುದು, ಅಲಕ್ಷವಹಿಸಿದರೆ ಅವು ಪರರ ಪಾಲಾಗಲೂಬಹುದು. ಆದರೆ ಯಾರಿಂದಲೂ ಕಳ್ಳತನ ಮಾಡಲಾಗದ ಜೀವನದ ಕೊನೆಯವರೆಗೂ ನಮ್ಮ ಜೊತೆಗಿರುವ ಎರಡು ಶ್ರೇಷ್ಠ ಆಸ್ತಿಗಳೆಂದರೆ ಅವು ಜ್ಞಾನ ಮತ್ತು ಆರೋಗ್ಯ. ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉತ್ತಮ ಆರೋಗ್ಯ ಸಂಪಾದಿಸಿಕೊಂಡು ತಮ್ಮ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕೆಂದು ಜುಂಜರವಾಡದ ಶಿವಲಿಂಗೇಶ್ವರ ದೇವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಇಂದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸಿದ್ಧರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಕತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಸಿಂಘಿ ಮಾತನಾಡಿ ಸರ್ಕಾರ ವಿದ್ಯಾರ್ಥಿಗಳಿಗಾಗಿ ಅನೇಕ ಭಾಗ್ಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಉತ್ತಮ ಆರೋಗ್ಯವಿದ್ದರೆ ಮಾತ್ರ ಈ ಎಲ್ಲಾ ಭಾಗ್ಯಗಳನ್ನು ಅನುಭವಿಸಬಹುದು. ಅನಾರೋಗ್ಯ ಪೀಡಿತವಾದರೆ ಸರ್ಕಾರ ಎಷ್ಟೇ ಭಾಗ್ಯಗಳನ್ನು ಘೋಷಿಸಿದರು ಅವು ಪ್ರಯೋಜನವಾಗುವುದಿಲ್ಲ. ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಸಮಾಜಸೇವಕ ಮುರುಗೇಂದ್ರಗೌಡ ಪಾಟೀಲ ಮಾತನಾಡಿ ಪ್ರಸ್ತುತ ಮೊಬೈಲ್ ಮತ್ತು ಟಿವಿಗಳ ಹಾವಳಿಯಿಂದ ಮಕ್ಕಳಲ್ಲಿ ಕ್ರಿಡೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್ ಗಳಲ್ಲಿ ಹೆಚ್ಚು ಆಟಗಳನ್ನಾಡುತ್ತಾ ದೈಹಿಕ ಶ್ರಮತೆ ಇಲ್ಲದೆ ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಗಳ ದಾಸರಾಗದೆ ಮೈದಾನಗಳಲ್ಲಿ ಆಟವಾಡುತ್ತಾ ಸದೃಢ ಆರೋಗ್ಯ ಸಂಪಾದಿಸಿಕೊಳ್ಳಬೇಕು ಎಂದರು.
ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ .ಪಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶಾಲೆಯ ಸಂಯೋಜಕ ರಾಜಶೇಖರ ಪಾಟೀಲ, ದೈಹಿಕ ನಿರ್ದೇಶಕ ಶ್ರೀಧರ ನೇಮಗೌಡ ಉಪಸ್ಥಿತರಿದ್ದರು . ಪ್ರಾರಂಭದಲ್ಲಿ ಶಾಲೆಯ ಪ್ರಾಚಾರ್ಯೆ ಪೂಜಾ ನಾಯಕ ಸ್ವಾಗತಿಸಿದರು. ಶಿಕ್ಷಕಿ ಸ್ವಾತಿ ಪೂಜಾರ ನಿರೂಪಿಸಿದರು, ಶೀನಾ ನಾಯಕ್ ಅತಿಥಿ ಪರಿಚಯಿಸಿದರು. ದೈಹಿಕ ಶಿಕ್ಷಕ ಉಮೇಶ ಪಟ್ಟೇದ ಕ್ರೀಡಾಕೂಟ ನಡೆಸಿಕೊಟ್ಟರು. ಕೊನೆಗೆ ಶಿಕ್ಷಕಿ ಪ್ರೀತಿ ಅವಲಕ್ಕಿ ವಂದಿಸಿದರು.


