ಬೆಳಗಾವಿ: ಸೌಹಾರ್ದ ಸಹಕಾರಿ ಕಾಯ್ದೆಯು ರಾಜ್ಯದಲ್ಲಿ ಜಾರಿಗೆ ಬಂದು 25 ವರ್ಷ ಪೂರ್ಣಗೊಂಡು 26 ವರ್ಷಕ್ಕೆ ಕಾಲು ಇಟ್ಟಿದೆ. ರಾಜ್ಯದಲ್ಲಿ ಎರಡು ಸಹಕಾರಿ ಕಾಯ್ದೆಗಳು ಜಾರಿಯಲ್ಲಿ ಇದ್ದು, ಅವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ಬಲಿಷ್ಠವಾಗಿ ಹೊಂದಲು ಆರ್ಥಿಕ ಶಿಸ್ತು ಮತ್ತು ಆಡಳಿತದಲ್ಲಿ ಪಾರದರ್ಶಕವಾಗಿ ನಡೆಸಿಕೊಂಡು ಹೋಗುವುದು ಅವಶಕತೆ ಇದೆ ಎಂದು ಸಹಕಾರ ಸಂಘಗಳ ಉಪನಿಬಂಧಕರಾದ ರವೀಂದ್ರ ಪಾಟೀಲ ಅವರು ಹೇಳಿದರು .
ಬೆಳಗಾವಿ ಪ್ರಾಂತೀಯ ಕಛೇರಿಯಲ್ಲಿ ಆಯೋಜಿಸಲಾದ ಸೌಹಾರ್ದ ಸಹಕಾರಿ ದಿನಾಚರಣೆ ನಿಮಿತ್ತವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಹಕಾರ ಧ್ವಜಾರೋಹಣ ನೆರವೇರಿ ಅವರು ಮಾತನಾಡಿದರು.
ಸಹಕಾರ ಸಂಘ/ಸೌಹಾರ್ದ ಸಹಕಾರಿ ಸಂಘಗಳನ್ನು ರಚಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಆಗಿದೆ. ಆದ್ದರಿಂದ ಸಹಕಾರ ಇಲಾಖೆಯ ಮತ್ತು ಸಂಯುಕ್ತ ಸಹಕಾರಿಯ ಅಧಿಕಾರಿಗಳು ಜನರಿಗೆ ಸಹಕಾರ/ಸೌಹಾರ್ದ ಕಾಯ್ದೆ ಮತ್ತು ನಿಯಮಗಳ ಬಗ್ಗೆ ತಿಳುವಳಿಕೆ ನೀಡುವುದು ಕರ್ತವ್ಯವಾಗಿದೆ ಎಂದರು.
ಹಿರಿಯ ಸಹಕಾರಿಗಳಾದ ಶಾಂತೀನಾಥ ನಾಯಕ ರವರು ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ, ಸಹಕಾರ ಸಂಘವು ಕೇವಲ ಒಂದು ವ್ಯಾಪಾರ ಸಂಸ್ಥೆಯಲ್ಲ, ಅದು ಸದಸ್ಯರ ಆರ್ಥಿಕ ಹಿತಾಸಕ್ತಿಯನ್ನು ಕಾಯುವ ಒಂದು ಪ್ರಜಾಪ್ರಭುತ್ವದ ವ್ಯವಸ್ಥೆ, ಕಾಯ್ದೆಯ ಪ್ರಕಾರ, ಸಂಘದ ಆರ್ಥಿಕ ಶಿಸ್ತನ್ನು ಕಾಪಾಡುವುದು ಆಡಳಿತ ಮಂಡಳಿಯ ಪ್ರಾಥಮಿಕ ಕರ್ತವ್ಯವಾಗಿದೆ.
ಸಕಾಲಕ್ಕೆ ಲೆಕ್ಕಪರಿಶೋಧನೆ ಮಾಡದಿದ್ದರೆ ಅಥವಾ ಸಹಕಾರ ಕಾಯ್ದೆಯನ್ನು ಉಲ್ಲಂಘಿಸಿದರೆ ಕಾನೂನು ಕ್ರಮಗಳನ್ನು ಜರುಗಿಸಲು ಅವಕಾಶವಿದೆ. ನಿರ್ದೇಶಕರು ಕಾಯ್ದೆಯನ್ನು ಪಾಲಿಸಿದಾಗ ಮಾತ್ರ ಸದಸ್ಯರ ಷೇರು ಹಣ ಮತ್ತು ಠೇವಣಿಗೆ ರಕ್ಷಣೆ ಸಿಗುತ್ತದೆ. ಲೆಕ್ಕ ಪರಿಶೋಧನೆಯು ಸಂಘದ “ಆರೋಗ್ಯ ತಪಾಸಣೆ” ಇದ್ದಂತೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿ, ಸದಸ್ಯರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದರು.
ಪ್ರಾಂತೀಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ ಮಾತನಾಡಿ, ಸೌಹಾರ್ದ ಸಹಕಾರಿ ಕಾಯ್ದೆಯು 25 ವರ್ಷಗಳು ಪೂರ್ಣಗೊಂಡು ರಜತ ಮಹೋತ್ಸವ ಆಚರಣೆ ಮಾಡಲಾಗಿದೆ. ಈ ಸೌಹಾರ್ದ ಕಾಯ್ದೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸಹಕಾರ ಸಂಘಗಳನ್ನು ಅಭಿವೃದ್ಧಿಪಡಿಸಿ ಉಳಿಸಿಕೊಂಡು ಹೋಗುವುದು ಎಲ್ಲಾರ ಕರ್ತವ್ಯವಾಗಿದೆ. ರಾಜ್ಯದಲ್ಲಿ ಕೆಲವು ಸಹಕಾರ ಸಂಘಗಳಲ್ಲಿ ತಮ್ಮ ವೈಯಕ್ತಿ ಉದ್ದೇಶಕ್ಕಾಗಿ ಸಹಕಾರಿ ಕ್ಷೇತ್ರಕ್ಕೆ ಧಕ್ಕೆ ಉಂಟು ಮಾಡಿರುವುದಕ್ಕೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸಹಕಾರ ಚಳವಳಿಯ ಉಳಿವಿಗೆ ಅನಿವಾರ್ಯವಾಗಿದೆ ಎಂದರು.
ಈ ವೇಳೆ ಹಿರಿಯ ಸಹಕಾರಿಗಳಾದ ರಾಘವೇಂದ್ರ ಪಾಟೀಲ, ಸಂಯುಕ್ತ ಸಹಕಾರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಇತರರು ಇದ್ದರು.


