ಹುನಗುಂದ: ಜೀವ ಕೈಯಲ್ಲಿ ಹಿಡಿದು ಬದುಕು ಸಾಗಿಸಿ ಕಷ್ಟ ಅನುಭವಿಸಿ ಸಾಕಾಗಿದೆ. ಇನ್ನಾದರೂ ಕೆಳ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ತಾಲೂಕ ಕರವೆ ಘಟಕ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ನಾಗಲಿಂಗ ನಗರದ ನಿವಾಸಿಗಳು ಹೊಸಪೇಟೆ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (೫೦) ಸಂಚಾರ ತಡೆದು ಮೇಲ್ಸೇತುವ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತಾಲೂಕ ಕರವೆ ಅಧ್ಯಕ್ಷ ಶರಣು ಗಾಣಗೇರ ಹಾಗೂ ಹುಸೇನ್ ಸಂಧಿಮನಿ ಮತ್ತು ಸ್ಥಳೀಯ ನಿವಾಸಿಗಳು ಮಾತನಾಡಿ, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಜೊತೆಗೆ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಹೀಗಾಗಿ ಮಕ್ಕಳು, ವಯೋವೃದ್ಧರು ಹೆದ್ದಾರಿ ದಾಟಬೇಕಾದರೆ ಹರಸಾಹಸ ಪಡಬೇಕಾಗಿದೆ. ಸ್ಥಳೀಯ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಕೆಳ ಸೇತುವೆ ನಿರ್ಮಿಸುವಂತೆ ಕಳೆದ ಎರಡು ಮೂರು ವರ್ಷಗಳಿಂದ ಲಿಖಿತವಾಗಿ ಮನವಿ ಕೊಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಲಾರಿ ಪಲ್ಟಿಯಾಗಿ ಬಿದ್ದ ಪರಿಣಾಮ ಹೆದ್ದಾರಿಯ ಒಂದು ಬದಿ ಸಂಚಾರ ಸ್ಥಗಿತಗೊಂಡಿದೆ. ಇನ್ನೊಂದು ಬದಿಯಲ್ಲಿ ಎರಡು ಬದಿಯಲ್ಲಿ ವಾಹನಗಳು ಸಂಚರಿಸುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಸ್ಥಳೀಯ ನಿವಾಸಿಗಳು ಜೀವಭಯದಲ್ಲಿ ಹೆದ್ದಾರಿ ದಾಟಬೇಕಾಗಿದೆ. ಹೀಗಾಗಿ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿದರು. ರಸ್ತೆ ಸಂಚಾರ ಬಂದಗೊಳಿಸಿ ಒಂದು ಘಂಟೆವೆರೆಗೆ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಅಪಘಾತವಾದ ಲಾರಿಯನ್ನು ತೆಗೆಯಲು ಮೂರುದಿನಗಳ ಕಾಲ ಬೇಕಾಯಿತು.
ಮೈಬೂಬ್ ಅಳ್ಳಳ್ಳಿ, ಮಹಮ್ಮದ್ ನದಾಫ್, ನವೀದ ಸಂಧಿಮನಿ ರಾಜು ಗುಳೇದಗುಡ್ಡ ಪಿ.ಐ. ಮುಚಖಂಡಿ ಪಾಲ್ಗೊಂಡಿದ್ದರು.
ಜೀವಭಯದಲ್ಲಿ ಹೆದ್ದಾರಿ ದಾಟಬೇಕಾಗಿದೆ : ಕೆಳ ಸೇತುವೆ ನಿರ್ಮಿಸಲು ಆಗ್ರಹಿಸಿ ಪ್ರತಿಭಟನೆ


