ಬಳ್ಳಾರಿ. ಡಿ. 31 : ಡಾ. ಬಿ.ಆರ್. ಅಂಬೇಡ್ಕರ್ ಸಂಘ (ರಿ), ಬಳ್ಳಾರಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿರುವ ಕಾನೂನುಬಾಹಿರ ಕ್ರಮಗಳನ್ನು ರದ್ದುಗೊಳಿಸಿ, ನಿಯಮಾನುಸಾರ ನಡೆದ ಆಯ್ಕೆ ಪ್ರಕ್ರಿಯೆಯನ್ನು ಮಾನ್ಯಗೊಳಿಸಬೇಕು ಎಂದು ಆಗ್ರಹಿಸಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಾಡಿಕೆಯಂತೆ ಪ್ರತಿಬಾರಿ ಸಹಕಾರ ಸಂಘಗಳ ಉಪನಿಬಂಧಕರ ಉಪಸ್ಥಿತಿಯಲ್ಲಿ ಸರ್ವಸದಸ್ಯರ ಸಮ್ಮುಖದಲ್ಲಿ ಚುನಾವಣೆ ನಡೆಸಲಾಗುತ್ತಿತ್ತು. 2022ನೇ ಸಾಲಿನ ಚುನಾವಣೆಯಲ್ಲಿ ಮತದಾನದ ಅರ್ಹತೆ ಪಡೆದ 44+98+238 ಸದಸ್ಯರ ಮತದಾನದ ಮೂಲಕ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು, ನಂತರ 25 ಜನ ನಿರ್ದೇಶಕರು ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರು.
ಆದರೆ ಸಂಘದ ಆಡಳಿತ ಅವಧಿ ದಿನಾಂಕ 12 ಅಕ್ಟೋಬರ್ 2025ಕ್ಕೆ ಮುಕ್ತಾಯವಾದ ನಂತರ ಸರ್ವಸದಸ್ಯರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಟ್ಟು ಕೇವಲ 14 ಜನರು ಖಾಸಗಿ ಸ್ಥಳದಲ್ಲಿ ಸಹಕಾರ ಸಂಘಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 12ರಂದು ನಡೆದ ಅಕ್ರಮ ಪದಾಧಿಕಾರಿಗಳ ಆಯ್ಕೆಯನ್ನು ರದ್ದುಗೊಳಿಸಿ, ದಿನಾಂಕ 17- ನವೆಂಬರ್ 2025 ರಂದು ಬಾಬು ಜಗಜೀವನರಾಂ ಭವನದಲ್ಲಿ ನಡೆದ ಮಹಾಸಭೆಯಲ್ಲಿ 44+98+238 ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಚರ್ಚೆ ನಡೆಸಿ, ಸರ್ವಾನುಮತದಿಂದ 25 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ. ಬಳಿಕ ಅದೇ ದಿನ ಸಂಜೆ 4 ಗಂಟೆಗೆ ನಡೆದ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತದಿಂದ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಹೀಗಾಗಿ ಸಹಕಾರ ಸಂಘಗಳ ನಿಯಮಾವಳಿಗಳ ಅನುಸಾರ ಹಾಗೂ ಕಾನೂನುಬದ್ಧವಾಗಿ ನಡೆದ ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಿಂಧುಗೊಳಿಸಿ, ಸಂಬಂಧಿಸಿದ ಸಹಕಾರ ಸಂಘಗಳ ಉಪನಿಬಂಧಕರಿಗೆ ಅಗತ್ಯ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಟಿ. ಪಂಪಾಪತಿ, ಉಪಾಧ್ಯಕ್ಷ ಬಿ. ನರಸಿಂಹಬಾಬು, ಪ್ರಧಾನ ಕಾರ್ಯದರ್ಶಿ ಕೆ. ವೆಂಕಟೇಶ್ ಮೂರ್ತಿ, ಖಜಾಂಚಿ ಪ್ರಸಾದ್, ಸಹ ಕಾರ್ಯದರ್ಶಿ ಆರ್. ಶಿವಶಂಕರ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.


