ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Hasiru Kranti
ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು:  ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ಚನ್ನಮ್ಮನ ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ತೃತೀಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಭಾನುವಾರ ಅರ್ಥಪೂರ್ಣವಾಗಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಡಾ. ಎಸ್. ಬಿ. ದಳವಾಯಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಪ್ರಸ್ತುತ ಪದಾಧಿಕಾರಿಗಳ ಅವಧಿಯಲ್ಲಿಯೇ ಇನ್ನೊಂದು ಸಾಹಿತ್ಯ ಸಮ್ಮೇಳನ ಆಯೋಜಿಸಬೇಕೆಂಬ ಚರ್ಚೆ ನಡೆದಿದೆ. ಗ್ರಾಮೀಣ ನೆಲೆಯಲ್ಲಿಯೇ ಸಾಹಿತ್ಯವನ್ನು ಜೀವಂತವಾಗಿಟ್ಟುಕೊಳ್ಳುವ ಕೆಲಸ ಕಸಾಪ ಮೂಲಕ ನಿರಂತರವಾಗಿ ನಡೆಯಬೇಕು” ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ಡಾ. ಜಗದೀಶ ಹಾರುಗೊಪ್ಪ ಅವರು ಮಾತನಾಡಿ, “ನಮ್ಮ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಸಾಹಿತಿಗಳು, ಕವಿಗಳು ಇದ್ದರೂ ಅವರು ಸಮಾಜದ ಗಮನಕ್ಕೆ ಬಾರದಿರುವುದು ವಿಷಾದಕರ. ಅಂತಹ ಮರೆಮಾಚಿದ ಪ್ರತಿಭೆಗಳನ್ನು ಮುನ್ನಲೆಗೆ ತರುವ ಮಹತ್ವದ ಕೆಲಸವನ್ನು ಕಿತ್ತೂರು ಕಸಾಪ ಮಾಡುತ್ತಿದೆ. ಈ ಭಾಗದ ಅನೇಕ ಸಾಹಿತಿಗಳು ಮೂಲತಃ ಕೃಷಿಕರಾಗಿದ್ದು, ರೈತರ ಬದುಕಿಗೆ ಸಾಹಿತ್ಯದ ಮೂಲಕ ಚಿಂತನೆ ನೀಡುವ ಉದ್ದೇಶದಿಂದ ಕೃಷಿ ಚಿಂತನೆ ಕುರಿತ ವಿಶೇಷ ಸಂವಾದವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ  ಬೆಂಗಳೂರಿನ ಖ್ಯಾತ ಚಿಂತಕ ಡಾ. ಬಿ. ಎಂ. ನಾಗಭೂಷಣ ಅವರು ಮಾತನಾಡಲಿದ್ದಾರೆ” ಎಂದು ತಿಳಿಸಿದರು.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಮಾತನಾಡಿ, “ಕಿತ್ತೂರು ತಾಲೂಕಾದ ನಂತರ ಮೂರನೇಯ ಕನ್ನಡ ಸಾಹಿತ್ಯ ಸಮ್ಮೇಳನವು ಶರಣರ ವಚನಗಳು ಹರಿದಾಡಿದ ಅನುಭವ ಮಂಟಪದಂತಹ ಪವಿತ್ರ ಸ್ಥಳದಲ್ಲಿ ನಡೆಯುತ್ತಿರುವುದು ಅತ್ಯಂತ ವಿಶೇಷ. ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿ ಹೊಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಂ. ಎಸ್. ಕಲ್ಮಠ, ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ, ನವೋದಯ ತರಬೇತಿದಾರರ ಸಂಘದ ಅಧ್ಯಕ್ಷ ಶಿವಾನಂದ ಮಾವಿನಕೊಪ್ಪ, ಸದಸ್ಯರಾದ ಕುಮಾರ ಪರದೇಶಿ, ಕ್ಯುರೇಟರ್ ರಾಘವೇಂದ್ರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ವಿವೇಕ ಕುರಗುಂದ ಅವರು ನಿಭಾಯಿಸಿದರು. ಗೌರವ ಕೋಶಾಧ್ಯಕ್ಷ ಮಹೇಶ್ವರ ಹೊಂಗಲ ಅವರು ವಂದನಾರ್ಪಣೆ ಮಾಡಿದರು.

ಸಾಹಿತ್ಯ, ಸಂಸ್ಕೃತಿ ಮತ್ತು ಕೃಷಿ ಚಿಂತನೆಯ ಸಂಗಮವಾಗಿರುವ ಈ ತೃತೀಯ ಸಾಹಿತ್ಯ ಸಮ್ಮೇಳನವು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗುವುದರ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಹೊಸ ಚೈತನ್ಯ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.

ಫೋಟೋ ಶೀರ್ಷಿಕೆ ಗಣ್ಯಮಾನ್ಯರು ಹಾಗೂ ಶ್ರೀಗಳು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

WhatsApp Group Join Now
Telegram Group Join Now
Share This Article