ಈ ಜಗತ್ತಿನಲ್ಲಿ ವಿವಿದ ಭಾಷೆಗಳನ್ನು ಮಾತನಾಡುವ ಅನೇಕ ಸಮುದಾಯಗಳ ಜನರು, ತಮ್ಮದೇ ಆದ ವೇಷ ಭೂಷನಗಳಿಂದ ಪಾರಂಪರಿಕ ಸಂಸ್ಕೃತಿ ಸಂಪ್ರದಾಯಗಳಿಂದ ಗುರುತಿಸಿಕೊಂಡಿರುವ ಹಾಗೆ ವಿವಿಧ ಧರ್ಮಗಳನ್ನು ಪಾಲಿಸುವ ಮೂಲಕ ಮತ್ತು ಧಾರ್ಮಿಕ ದೇವಾನು ದೇವತೆಗಳನ್ನು ಪೂಜಿಸುವ ವಿಶೇಷವಾಗಿ ಕಾಣುತ್ತಾರೆ. ಅದೆಷ್ಟೇ ಆಧುನಿಕ ದೇಶವಾದರೂ ಅಲ್ಲಿನ ಜನತೆ ಯಾವುದಾದರೂ ಒಂದು ಧರ್ಮವನ್ನು ನಂಬಿಕೊಂಡು ಬಂದಿರುತ್ತಾರೆ. ಕೆಲವು ಧರ್ಮಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೆ ಇನ್ನು ಕೆಲವು ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದವುಗಳಾಗಿವೆ. ಹಿಂದೂ,ಬೌದ್ಧ, ಜೈನ, ಶಿಖ್, ಯಹೂದಿ, ಕ್ರೈಸ್ತ, ಇಸ್ಲಾಮ್ ಮೊದಲಾದ ಧರ್ಮಗಳು ನಮಗೆ ಸಹಿಷ್ಣುತೆ, ಸಮಬಾಳ್ವೆ, ಶಿಸ್ತು ಸಂಸ್ಕೃತಿ ಸಂಸ್ಕಾರವನ್ನು ಕಲಿಸುತ್ತವೆ. ಇಂತಹ ಧರ್ಮಗಳಲ್ಲಿ ಒಂದಾದ ಇಸ್ಲಾಂ ಧರ್ಮ ಮತ್ತು ಇಲ್ಲಿ ಆಚರಿಸುವ ಪ್ರಮುಖ ರಂಜಾನ್ ಹಬ್ಬದ ಕುರಿತು ಈ ವಿಶೇಷ ಲೇಖನ
ಇಸ್ಲಾಂ ಧರ್ಮ: ಇಸ್ಲಾಂ ಧರ್ಮದ ಅನುಯಾಯಿಗಳನ್ನು ಮುಸ್ಲಿಮರು ಎಂದು ಕರೆಯಲಾಗುತ್ತದೆ. ಮುಸ್ಲಿಮರು ಎಂದರೆ ದೇವರ ಇಚ್ಛೆಗೆ ಶರಣಾದವರು ಎಂದರ್ಥ್. ಕ್ರೈಸ್ತ ಧರ್ಮದ ನಂತರ ಇಸ್ಲಾಂ ಧರ್ಮವು ಜಗತ್ತಿನ ಎರಡನೆ ಅತಿದೊಡ್ಡ ಧರ್ಮವಾಗಿದೆ.
ಮುಸಲ್ಮಾನರು ‘ಖುರಾನ’ ಗ್ರಂಥವನ್ನು ದೇವರ ಅಕ್ಷರಶಃ ಮಾತುಗಳು ಮತ್ತು ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸುರಕ್ಷಿತವಾಗಿ ಸಂರಕ್ಷಿಸಲಾದ ಧರ್ಮ ಗ್ರಂಥವೆಂದು ನಂಬುತ್ತಾರೆ. ಇವರು ಮುಹಮ್ಮದ್ ಪೈಗಂಬರರನ್ನು ಇಸ್ಲಾಂ ಧರ್ಮದ ಪ್ರಮುಖ ಮತ್ತು ಅಂತಿಮ ಪ್ರವಾದಿಯೆಂದು ಪರಿಗಣಿಸುತ್ತಾರೆ. ಮುಹಮ್ಮದ್ ಪೈಗಂಬರರ ನುಡಿಮುತ್ತುಗಳನ್ನು ಮತ್ತು ಜಗತ್ತಿಗೆ ಸಾರಿದ ಸಂದೇಶಗಳನ್ನು ಸುನ್ನತ್ ಎಂದು ಕರೆಯಲಾಗುತ್ತಿದ್ದು ಇವುಗಳನ್ನು ಹದೀಸ್ ಎಂಬ ಹೆಸರಿನಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ. ‘ಖುರಾನ’ ಮತ್ತು ‘ಹದೀಸ್’ ಗಳು ಇಸ್ಲಾಂ ಧರ್ಮದ ಧಾರ್ಮಿಕ ಭೋದನೆಗಳನ್ನು ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರುವ ಪ್ರಮುಖ ಮೂಲ ಆಧಾರಗಳಾಗಿವೆ.
ಇಸ್ಲಾಮಿನ ಐದು ಸ್ತಂಭಗಳು: ಇಸ್ಲಾಮಿನ ಆಚರಣೆ ಮತ್ತು ನಂಬಿಕೆಗಳು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ.. ಇಸ್ಲಾಂ ಧರ್ಮದ ಮುಖ್ಯ ಪಂಚಸ್ತಂಭಗಳಾಗಿರುವ ಶಹದಾ : ಅಲ್ಲಾಹನ ಹೊರತು ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಪೈಗಂಬರರು ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ನುಡಿಯುವುದು.
ಸಲಾಹ್: ಮುಸ್ಲಿಮರು ದಿನನಿತ್ಯವೂ ಐದು ಬಾರಿ ನಮಾಝ್ ಮಾಡಿಕೊಳ್ಳುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸುತ್ತಾರೆ. ಝಕಾತ್ : ಝಕಾತ್ ಎಂದರೆ ಶುದ್ಧೀಕರಣ. ಕಡ್ಡಾಯವಾಗಿ ಅನ್ನ, ಆಹಾರ, ಸಂಪತ್ತನ್ನು ಬಡವರಿಗೆ ವಾರ್ಷಿಕವಾಗಿ ದಾನ ಮಾಡುವದಾಗಿದೆ.
ರೋಜಾ : ರಂಜಾನ್ ತಿಂಗಳಲ್ಲಿ ಮುಸ್ಲಿಮರು ಧಾರ್ಮಿಕ ಕಾರ್ಯ ಸಿದ್ದಿ ಪಾಲನೆಯ ಮೂಲಕ ಒಂದು ತಿಂಗಳುಗಳ ಕಾಲ ಉಪವಾಸ ವ್ರತವನ್ನು ಪಾಲಿಸುವದಾಗಿದೆ.
ಹಜ್: ಆರ್ಥಿಕ ಹಾಗೂ ದೈಹಿಕ ಸಾಮರ್ಥ್ಯವಿರುವವರು ಹಜ್ಜ್ ನಿರ್ವಹಿಸಲು ಮಕ್ಕಾ ಮದಿನಾಗೆ ಹೋಗುವದಾಗಿದೆ. ಪ್ರತಿಯೊಬ್ಬ ಮುಸಲ್ಮಾನನು ಇವುಗಳನ್ನು ಕಡ್ಡಾಯವಾಗಿ ಪಾಲಿಸುವದರೊಂದಿಗೆ ನಿರ್ವಹಿಸಬೇಕಾಗಿದೆ. ರಂಜಾನ್ ಮತ್ತು ಬಕ್ರೀದ್ ಇಸ್ಲಾಂ ಧರ್ಮದ ಎರಡು ಪ್ರಮುಖ ಹಬ್ಬಗಳಾಗಿವೆ.
ಹಾಗಾದರೆ ಈ ಲೇಖನದ ಮೂಲಕ ಶಾಂತಿ ಸೌಹಾರ್ದತೆಯೊಂದಿಗೆ ಧಾರ್ಮಿಕ ಬಾಂಧವ್ಯದ ನಂಟನ್ನು ಗಟ್ಟಿಗೊಳಿಸುವ ಮುಸ್ಲಿಮರ ಪವಿತ್ರವಾದ ರಂಜಾನ್ ಹಬ್ಬದ ಆಚರಣೆ ಕುರಿತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕೋಣ
ರಂಜಾನ್ ಪ್ರಾಮುಖ್ಯತೆ: ಇಸ್ಲಾಮಿನ ಐದು ಸ್ತಂಭಗಳಲ್ಲಿ ನಾಲ್ಕನೆಯ ಕಡ್ಡಾಯ ಕರ್ಮಸ್ತಂಭವಾಗಿರುವ ರಂಜಾನ್ ಒಂದು ತಿಂಗಳ ಕಾಲ ಉಪವಾಸ ವ್ರತದೊಂದಿಗೆ ಇಸ್ಲಾಮಿನ ಧಾರ್ಮಿಕ ಸಾಂಪ್ರದಾಯಿಕ ವಿಧಿ ವಿಧಾನಗಳ ಪಾಲನೆಯೊಂದಿಗೆ ಆಚರಿಸುವ ಧಾರ್ಮಿಕ ವ್ರತಾಚರಣೆಯಾಗಿದೆ. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತಮದವರೆಗೆ ಧರ್ಮ ಪಾಲನೆಗೆ ನಿಷ್ಠುರಾಗಿ ಅಲ್ಲಾ ದೇವರ ಕೃಪೆಗೆ ಪಾತ್ರರಾಗಿ ಭಕ್ತಿಯಿಂದ ಅನ್ನ, ಆಹಾರ ಪಾನೀಯಗಳನ್ನು, ಹಾಗು ದುಶ್ಚಟಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಕಾಮ್, ಕ್ರೋಧ, ಮಧ ಮತ್ಸಹ ಸೇರಿದಂತೆ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಸ್ವಚ್ಛ ಹಾಗು ಪರಿಶುದ್ಧತೆಯೊಂದಿಗೆ ಪವಿತ್ರ ಗೊಳಿಸುವುದೇ ರಂಜಾನ್ ಹಬ್ಬದ ಪ್ರಾಮುಖ್ಯತೆಯಾಗಿದೆ.
ಇತಿಹಾಸ: ಲೋಕ ಕಲ್ಯಾಣಕ್ಕಾಗಿ ಮಾನವಕುಲಕ್ಕೆ ಮಾರ್ಗದರ್ಶನವನ್ನು ನೀಡಲು ರಚಿಸಿದ ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ ಅವತಿರ್ಣಗೊಂಡ ತಿಂಗಳು ರಂಜಾನವಾಗಿದೆ, ಇದರ ಸ್ಮರಣಾರ್ಥಕವಾಗಿ ಪ್ರತಿವರ್ಷವೂ ಒಂದು ತಿಂಗಳ ಕಾಲ ರಂಜಾನ್ ನಾಮದೊಂದಿಗೆ ಮುಸ್ಲಿಮರು ವ್ರತಾಚರಣೆಯನ್ನು ಮಾಡುತ್ತಾರೆ. ಹಿಜ್ರಾ ಶಕೆ 642 ರ ಎರಡನೇ ವರ್ಷದಲ್ಲಿ ಮುಸ್ಲಿಮರು ಮೊದಲ ಬಾರಿಗೆ ಉಪವಾಸ ಮಾಡಬೇಕೆಂದು ಆಜ್ಞಾಪಿಸಲಾಗಿದೆ,
ನಂತರದ ಕಾಲದಿಂದಲು ಮುಸ್ಲಿಮರು ಕ್ರಮೇಣವಾಗಿ ರೋಜಾ ವ್ರತಗಳನ್ನು ಪಾಲಿಸುವದರೊಂದಿಗೆ ಝಕಾತ್ ಕರ್ಮ ಸ್ತಂಬದಂತೆ ದಾನ ಧರ್ಮ ಮಾಡುತ್ತಾ ಈ ಹಬ್ಬವನ್ನು ಆಚರಿಸುತ್ತಾ ಬಂದಿರುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ ಪ್ರಕಾರ 9 ನೇ ತಿಂಗಳನಲ್ಲಿ ರಂಜಾನ್ ಹಬ್ಬದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ. ಇದು ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರಗಳನ್ನು ಆಧರಿಸಿರುವುದರಿಂದ ಪ್ರತಿ ವರ್ಷವೂ ದಿನ ಬದಲಾವಣೆಯೊಂದಿಗೆ ರಂಜಾನ್ ಆಚರಿಸಲಾಗುತ್ತದೆ.
ಧಾರ್ಮಿಕ ಆಚರಣೆಗಳು: ರಂಜಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವೃತ ಕೈಗೊಳ್ಳುತ್ತಾರೆ. ರೋಜಾ ಮಾತ್ರವಲ್ಲದೇ ದಾನ ಝಕಾತ್, ನಮಾಜ್, ಖುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು ಸ್ಮರಿಸಲಾಗುತ್ತದೆ. “ರಂಜಾನ್ ಬಂದಾಗ, ಸ್ವರ್ಗದ ದ್ವಾರಗಳು ತೆರೆದುಕೊಳ್ಳುತ್ತವೆ ಮತ್ತು ನರಕದ ಬಾಗಿಲುಗಳು ಮುಚ್ಚಲ್ಪಡುತ್ತವೆ” ಎಂದು ಮುಸ್ಲಿಮ ಸಹೋದರರು ರುಡಿಯಿಂದ ಈ ಹಬ್ಬದ ವಿಶೇಷತೆಯ ಕುರಿತು ನುಡಿಯುತ್ತಾರೆ ಅಷ್ಟೊಂದು ಮಹತ್ವ ಸಾರುವ ಈ ಹಬ್ಬದ ಧಾರ್ಮಿಕ ಆಚರಣೆಯ ಕುರಿತು ತಿಳಿದುಕೊಳ್ಳೋಣ.
ಹಿಲಾಲ್: ಚಾಂದರಾತ: ಮುಸ್ಲಿಂ ಬಾಂಧವರು ಚಂದ್ರನನ್ನು ರಂಜಾನ್ ಪ್ರಾರಂಭವಾಗುವ ಮೊದಲ ದಿನದಂದು ನೋಡಿಕೊಂಡು ರೋಜಾ ವ್ರತವನ್ನು ಕೈಗೊಳ್ಳುತ್ತಾರೆ. ಮತ್ತು ಮೂವತ್ತು ದಿನಗಳ ಸತತವಾಗಿ ರೋಜಾ ವ್ರತವನ್ನು ಪಾಲಿಸಿಕೊಂಡು ರಂಜಾನ್ ಕೊನೆಗೊಳ್ಳುವ ಕೊನೆಯ ದಿನದಂದು ಮತ್ತೊಮ್ಮೆ ಚಂದ್ರನನ್ನು ನೋಡಿಕೊಳ್ಳುವುದರ ಮೂಲಕ ಪ್ರಮುಖವಾಗಿ ಹಿಲಾಲ್ (ಚಾಂದರಾತ) ರಾತ್ರಿಯನ್ನು ಆಚರಿಸುತ್ತಾರೆ.
ಉಪವಾಸ: ರೋಜಾ: ಉಪವಾಸ ಕೇವಲ ಶಾರೀರಿಕ ಕ್ರಿಯೆಯಲ್ಲ , ಇದು ಮುಸ್ಲಿಮರನ್ನು ಅಲ್ಲಾಹ ದೇವರ ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಆಧ್ಯಾತ್ಮಿಕ ಕ್ರಿಯೆಯಾಗಿದೆ. ಉಪವಾಸವು ಮುಂಜಾನೆ ಪ್ರಾರಂಭವಾಗಿ ಸಾಯಂಕಾಲ ಸಮಯದಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ತಿನ್ನುವುದು ಮತ್ತು ಕುಡಿಯುವುದನ್ನು ತ್ಯಜಿಸುವುದರ ಜೊತೆಗೆ, ಮುಸ್ಲಿಮರು ಶಾರೀರಿಕ ಸಂಬಂಧಗಳಿಂದ, ದುಶ್ಚಟಗಳಿಂದ , ದುರ್ನಡುವಿಕೆಗಳಿಂದ ದೂರವಿರುತ್ತಾರೆ. ಉಪವಾಸವು ಲೌಕಿಕ ಚಟುವಟಿಕೆಗಳಿಂದ ಹೃದಯವನ್ನು ಮರುನಿರ್ದೇಶಿಸುತ್ತದೆ ಮತ್ತು ಹಾನಿಕಾರಕ ಕಲ್ಮಶಗಳಿಂದ ಮುಕ್ತಗೊಳಿಸುವ ಮೂಲಕ ಆತ್ಮವನ್ನು ಶುದ್ಧೀಕರಿಸುತ್ತದೆ ಎಂದು ಉಪವಾಸ ಮಾಡಲಾಗುತ್ತದೆ.
ಸಹರಿ: ರೋಜಾ ಇರುವ ಬಾಂಧವರು ಸಾಮಾನ್ಯವಾಗಿ ಬೇಗನೆ ಎದ್ದು ತಮ್ಮ ಉಪವಾಸವನ್ನು ಪ್ರಾರಂಭಿಸುವ ಮೊದಲು ಸೂರ್ಯೋದಯದ ಪೂರ್ವದಲ್ಲಿ ಸೇವಿಸುವ ಲಘು ಆಹಾರವನ್ನು ಸುಹೂರ್ ಅಥವಾ ಸಹರಿ ಎಂದು ಕರೆಯಲಾಗುತ್ತದೆ
ಇಫ್ತಾರ್: ಪ್ರತಿದಿನ ಸೂರ್ಯಾಸ್ತದ ನಂತರ ಈಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಕೆಲವರು ಮನೆಗಳಲ್ಲಿ ಕುಟುಂಬದವರ ಜೊತೆಗೂಡಿ ಮೊದಲು ಖರ್ಜೂರ ತಂಪು ಪಾನೀಯ ಹಾಗು ಹಣ್ಣುಗಳನ್ನು ತಿನ್ನುವ ಮೂಲಕ ಉಪವಾಸವನ್ನು ಮುರಿಯುತ್ತಾರೆ. ನಂತರ ಭೋಜನವನ್ನು ಸವಿಯುತ್ತಾರೆ ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇಪ್ತಾರ್ ಕೂಟವು ಬಡವ, ಶ್ರೀಮಂತ ಎಂಬ ಬೇಧಬಾವ ಮರೆತು ಮಾನವಿಯತೆ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವದಾಗಿದೆ.
ಖುರಾನ ಭೋಧನೆ: ರಂಜಾನ್ ಹಬ್ಬದ ಮೂವತ್ತು ದಿನಗಳಲ್ಲಿ ಮೂವತ್ತು ಜುಜ್ ಅಂದರೆ ಮೂವತ್ತು ವಿಭಾಗಗಳನ್ನು ಒಳಗೊಂಡಿರುವ ಸಂಪೂರ್ಣ ಖುರಾನ್ ಗ್ರಂಥವನ್ನು ಓದಲು ಮುಸ್ಲಿಮರನ್ನು ಪ್ರೋತ್ಸಾಹಿಸಲಾಗುತ್ತದೆ .
ತರಾವಿಹ್: ತರಾವಿಹ್ ಎಂಬುದು ಭಕ್ತರು ಮಾಡುವ ತಡರಾತ್ರಿಯ ಪ್ರಾರ್ಥನೆಯಾಗಿದೆ. ಮುಸ್ಲಿಂ ಸಹೋದರರು ರಂಜಾನ್ ತಿಂಗಳಲ್ಲಿ ಪ್ರತಿ ರಾತ್ರಿ ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ
ಝಕಾತ್: ದಾನ: ಝಕಾತ್ ಸಮಾಜಕ್ಕೆ ಮತ್ತು ಆರ್ಥಿಕವಾಗಿ ಹಿಂದುಳಿದ ಬಡವವರಿಗೆ ನಿರ್ಗತಿಕರಿಗೆ ಅನ್ನ, ಆಹಾರ, ವಸ್ತುಗಳನ್ನೂ, ಆಭರ್ಣಗಳನ್ನು, ಸಂಪತ್ತನ್ನು ದಾನವಾಗಿ ನೀಡುವ ಒಂದು ಮಾರ್ಗವಾಗಿದೆ. ಇದು ಜನರು ತಮ್ಮಲ್ಲಿರುವುದಕ್ಕೆ ಕೃತಜ್ಞರಾಗಿರಲು ಮತ್ತು ಅಗತ್ಯವಿರುವ ಜನರಿಗೆ ಸಹಾಯ ಹಸ್ತವನ್ನು ನೀಡಲು ಕಲಿಸುತ್ತದೆ.
ಈದ್ ಉಲ್ ಪಿತರ್: ರಮದಾನ್ : ರಂಜಾನ್ ಆಧ್ಯಾತ್ಮಿಕ ಪ್ರತಿಫಲನ, ಸ್ವಯಂ-ಸುಧಾರಣೆ ಮತ್ತು ಮುಸ್ಲಿಮರಿಗೆ ಹೆಚ್ಚಿದ ಆರಾಧನೆಯ ಸಮಯ ಎಂದು ಉದ್ದೇಶಿಸಲಾಗಿದೆ. ಮೂವತ್ತು ದಿನಗಳ ಉಪವಾಸ ಮುಕ್ತಾಯದ ನಂತರ ಶವಾಲ್ನ ತಿಂಗಳಿನ ಮೊದಲನೆಯ ದಿವಸದಂದು ಈದ್ ಉಲ್ ಪಿತರ್ ಹಬ್ಬವನ್ನೂ ಆಚರಿಸಲಾಗುತ್ತದೆ. ಈ ರಂಜಾನ್ ಹಬ್ಬದಂದು ಮುಸ್ಲಿಂ ಬಾಂಧವರು ಹೊಸ ವ, ಸ್ವಚ್ಚ ಬಟ್ಟೆಗಳನ್ನು ತೋಡಿಕೊಂಡು ತಮ್ಮ ತಮ್ಮ ಮನೆಗಳಲ್ಲಿ ಬಂದು ಭಾಂದವ್ಯದವರೊಂದಿಗೆ ಜೊತೆಗೂಡಿ ಖುಷಿಯಿಂದ ಶಿರ ಖುರ್ಮಾ ಸಿಹಿ ಪದಾರ್ಥವನ್ನು ಸೇವಿಸಿಕೊಂಡು ನಂತರ ಮಸೀದಿ ಇದ್ಗಾಗಳಿಗೆ ತೆರಳಿ ದೇವರಲ್ಲಿ ನಮಾಜ ಮಾಡುವ ಮೂಲಕ ತಮ್ಮ ಒಳಿತಿಗಾಗಿ ಬೇಡಿಕೊಳ್ಳುತ್ತಾರೆ. ಈ ದಿನದಂದು ಮುಸ್ಲಿಂ ಸಹೋದರರು ಈದ್ ಮುಬಾರಕ್ ಎಂದು ಹೇಳುತ್ತಾ ಪರಸ್ಪರ ಅಪ್ಪಿಕೊಳ್ಳುತ್ತಾ ವಿಶೇಷವಾಗಿ ರಂಜಾನ್ ಹಬ್ಬವನ್ನು ಸರಳ ರೀತಿಯಲ್ಲಿ ಸಾಂಪ್ರಾದಾಯಿಕವಾಗಿ ಆಚರಿಸುತ್ತಾರೆ.
ರಂಜಾನ್ ಆಚರಿಸುವ ಉದ್ದೇಶ:- ಈ ಆಚರಣೆಯು ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಆಲ್ಪೌಪಹಾರ ಸೇವಿಸದೇ ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯ ಅರಿವನ್ನು ಮೂಡಿಸುತ್ತದೆ, ಇಲ್ಲಿ ಬಡವ – ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ಸಮಾನರಾಗಿ ವೃತಾಚರಣೆಯಲ್ಲಿ ತೊಡಗುತ್ತಾರೆ ಇದು ಸಮಾನತೆ ಮತ್ತು ಏಕತೆಯನ್ನು ಸಾರುತ್ತದೆ. ಈ ಹಬ್ಬವು ಸಂದರ್ಭೋಚಿತವಾಗಿ ದಾನ್ಯ, ಸಂಪತ್ತನ್ನು ಬಡ ನಿರ್ಗತಿಕರಿಗೆ ದಾನ ಮಾಡುವುದನ್ನು ತಿಳಿಸುತ್ತದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ರಂಜಾನ್ ಹಬ್ಬದ ಪ್ರಮುಖ ಉಧ್ದೇಶವಾಗಿದೆ. ಇಲ್ಲಿನ ನಿಸ್ವಾರ್ಥ ಮನೋಭಾವದಿಂದ ಮಾನವ ಕಲ್ಯಾಣಕ್ಕಾಗಿ ಎಲ್ಲರೂ ಜೊತೆಗೂಡಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವದು ವಿಶೇಷತೆಯಾಗಿದೆ. ಸ್ವಯಂ ಶಿಸ್ತನ್ನು ಹೊಂದಲು , ಬಡವರ ದುಃಖವನ್ನು ಅರಿಯಲು ಆತ್ಮವನ್ನು ಶುದ್ಧೀಕರಿಸಲು, ಸಮುದಾಯದ ಸಂಬಂಧ ಸುಧಾರಿಸಲು, ಅನ್ಯರಿಗೆ ಸಹಕಾರ ನೀಡಲು, ಧಾರ್ಮಿಕ ಸಂಸ್ಕೃತಿಕವಾಗಿ ನೆಲೆಯೂರಲು ಸುಸಜ್ಜಿತ ಮಾರ್ಗವನ್ನು ತೋರುವದೆ ಈ ರಂಜಾನ್ ಹಬ್ಬದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ರಂಜಾನ್ ಹಬ್ಬದ ಉದ್ದೇಶದಂತೆ ಜಗತ್ತಿನಲ್ಲಿ ನೆಲೆಯೂರಿರುವ ಪ್ರತಿಯೊಂದು ಸಂಯುದಾಯದ ಜನರು ತಮ್ಮ ಜಾತಿ, ಮತ, ಧರ್ಮ, ಪಂಥ ಮತ್ತು ಪಂಗಡಗಳ ಬೇಧ ಭಾವ ಮರೆತು, ನಾನು ಎಂಬ ಅಹಂಕಾರ ದುರ್ನಡತೆಯನ್ನು ತೊರೆದು, ಮೋಸ, ವಂಚನೆ, ಕ್ರೂರ ವರ್ತನೆ, ದುರಲೋಚನೆಗಳಿಗೆ ವಿರಾಮವಿಟ್ಟು ಮಾನವ ಕಲ್ಯಾಣಕ್ಕಾಗಿ, ಲೋಕದ ಉದ್ದರಕಾಗಿ ಎಕತೆಯ ಸಹಬಾಳ್ವೆಯೊಂದಿಗೆ ಪರಸ್ಪರರು ಸಹಾಯ, ಸಹಕಾರ, ಸಹೋದರತ್ವ ಭಾವದಿಂದ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂಬುದು ಈ ಲೇಖನದ ಪ್ರಮುಖ ಆಶಯವಾಗಿದೆ.
ಲೇಖಕರು:ಪಾಂಡು ಆಲಪ್ಪ ಚವ್ಹಾಣ
ಉಪನ್ಯಾಸಕರು ಬೇಳಧಡಿ- ಗದಗ