ಬದಲಾಗುತ್ತಿರುವ ಜಗತ್ತಿನಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನ ಅಗತ್ಯ: ಪದ್ಮಶ್ರೀ ಅಡ್ವೊಕೇಟ್ ಉಜ್ವಲ್ ನಿಕಮ್ 

Hasiru Kranti
ಬದಲಾಗುತ್ತಿರುವ ಜಗತ್ತಿನಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನ ಅಗತ್ಯ: ಪದ್ಮಶ್ರೀ ಅಡ್ವೊಕೇಟ್ ಉಜ್ವಲ್ ನಿಕಮ್ 
WhatsApp Group Join Now
Telegram Group Join Now

ಬೆಳಗಾವಿ: “ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಅದಕ್ಕೆ ತಕ್ಕಂತೆ ಯುವ ಪೀಳಿಗೆಯ ಆಲೋಚನೆಗಳೂ ಬದಲಾಗುತ್ತಿವೆ. ಇಂದು ಮಕ್ಕಳು ಮತ್ತು ಪೋಷಕರ ನಡುವಿನ ಸಂವಹನ ಕಡಿತಗೊಳ್ಳುತ್ತಿರುವುದು ಆತಂಕಕಾರಿ ವಿಷಯ. ಇಂತಹ ಸಂದರ್ಭದಲ್ಲಿ ನಾವು ಪ್ರೀತಿ ಮತ್ತು ವಿಶ್ವಾಸದ ಸಂಬಂಧಗಳನ್ನು ಉಳಿಸಿಕೊಳ್ಳಬೇಕಾಗಿದೆ,” ಎಂದು ಖ್ಯಾತ ಕಾನೂನು ತಜ್ಞ ಹಾಗೂ ಪದ್ಮಶ್ರೀ ಪುರಸ್ಕೃತ ಸಂಸದ ಅಡ್ವೊಕೇಟ್ ಉಜ್ವಲ್ ನಿಕಮ್ ಹೇಳಿದರು.

ಇಲ್ಲಿನ ಮಂಡೋಳಿ ರಸ್ತೆಯ ಸಾಯಿರಾಜ್ ಲಾನ್ಸ್‌ನಲ್ಲಿ ಆಯೋಜಿಸಲಾಗಿದ್ದ ‘ಜ್ಞಾನದೀಪ ಎಜುಕೇಶನ್ ಟ್ರಸ್ಟ್’ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ವೇದಿಕೆಯ ಮೇಲೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ, ಶಾಸಕ ಅಭಯ ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಡ್ವೊಕೇಟ್ ಚಂದ್ರಹಾಸ್ ಅಣವೇಕರ್, ಪ್ರಾಚಾರ್ಯೆ ಡಾ. ನವೀನಾ ಶೆಟ್ಟಿಗಾರ್ ಹಾಗೂ ಸಂಸ್ಥೆಯ ಸಂಚಾಲಕರು ಉಪಸ್ಥಿತರಿದ್ದರು.

ಮುಂದುವರಿದು ಮಾತನಾಡಿದ ಅಡ್ವೊಕೇಟ್ ನಿಕಮ್, “ಇಂದು ಯುವ ಪೀಳಿಗೆಯ ಜೊತೆಗೆ ಪೋಷಕರೂ ಟಿವಿ ಮತ್ತು ಮೊಬೈಲ್‌ಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಕೌಟುಂಬಿಕ ಸಂವಹನ ನಾಶವಾಗುತ್ತಿದೆ. ನಮ್ಮ ದೇಶವು ವಿವಿಧ ಭಾಷೆಗಳಿಂದ ಸಮೃದ್ಧವಾಗಿದೆ. ಸಣ್ಣಪುಟ್ಟ ವಿವಾದಗಳಿಗೆ ಗಮನ ನೀಡುವ ಬದಲು ನಾವು ರಾಷ್ಟ್ರೀಯ ಭಾವೈಕ್ಯತೆಗೆ ಒತ್ತು ನೀಡಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ,” ಎಂದರು. ಇದೇ ಸಂದರ್ಭದಲ್ಲಿ ಅವರು 1993ರ ಮುಂಬೈ ಸರಣಿ ಸ್ಫೋಟದ ಪ್ರಕರಣದ ವಿಚಾರಣೆಯ ಸಂದರ್ಭದ ತಮ್ಮ ಅನುಭವಗಳನ್ನು ಹಂಚಿಕೊಂಡರು. “ವಕೀಲ ವೃತ್ತಿಯಲ್ಲಿ ತೊಡಗಿದ್ದಾಗ ಎದುರಿಗಿರುವ ವ್ಯಕ್ತಿಯ ಮನದ ಭಾವನೆಗಳನ್ನು ಅರಿಯುವ ಕಲೆ ಒಲಿಯಿತು. ಬೆಳಗಾವಿಯ ವಡಗಾಂವ್ ನನ್ನ ಅಜ್ಜಿ ಮನೆಯಾಗಿದ್ದು, ಬಾಲ್ಯದ ರಜಾದಿನಗಳಲ್ಲಿ ನಾನು ಇಲ್ಲಿಗೆ ಬರುತ್ತಿದ್ದೆ,” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಯಕ್ರಮವು ಯೋಗೇಶ್ ರಾಮದಾಸ್ ಅವರ ಈಶಸ್ತವನದೊಂದಿಗೆ ಆರಂಭವಾಯಿತು. ಕುಮಾರಿ ರಶ್ಮಿ ಸುತಾರ್ ಸ್ವಾಗತ ಗೀತೆ ಹಾಡಿದರು. ನಂತರ ಗಣ್ಯರು ದೀಪ ಪ್ರಜ್ವಲನೆ ಮಾಡಿದರು. ಡಾ. ನವೀನಾ ಶೆಟ್ಟಿಗಾರ್ ಅವರು ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ಸೌ ಭಾಗ್ಯಶ್ರೀ ಅಣವೇಕರ್ ಅವರು ಟ್ರಸ್ಟ್‌ನ 50 ವರ್ಷಗಳ ಸುದೀರ್ಘ ಪಯಣದ ಅವಲೋಕನ ಮಾಡಿದರು.

ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ ಮಾತನಾಡಿ, “50 ವರ್ಷಗಳ ಹಿಂದೆ ಈ ಶಾಲೆಯನ್ನು ಸ್ಥಾಪಿಸಿದ ಮಹನೀಯರನ್ನು ನಾವು ಅಭಿನಂದಿಸಬೇಕು. ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಇದು ಆ ಶಿಕ್ಷಕರ ಶ್ರಮದ ಫಲ. ಮುಂದಿನ 50 ವರ್ಷಗಳ ನಂತರ ಈ ಸಂಸ್ಥೆಯ ಶತಮಾನೋತ್ಸವವೂ ಇಷ್ಟೇ ಸಂಭ್ರಮದಿಂದ ಆಚರಿಸಲ್ಪಡಲಿ,” ಎಂದು ಹಾರೈಸಿದರು.

ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, “1975 ರಲ್ಲಿ ಬಿತ್ತಿದ ಸಣ್ಣ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ. ಶಾಲೆಗಳು ಕೇವಲ ಮನುಷ್ಯರನ್ನು ತಯಾರು ಮಾಡುವ ಕಾರ್ಖಾನೆಗಳಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾದ ಸತ್ಪ್ರಜೆಗಳನ್ನು ರೂಪಿಸುವ ಕೇಂದ್ರಗಳಾಗಬೇಕು. ಜ್ಞಾನದೀಪ ಸಂಸ್ಥೆಯು ನಂದಿಹಳ್ಳಿ ಗ್ರಾಮದಲ್ಲಿ ಹೊಸ ಶಾಲೆಯನ್ನು ಆರಂಭಿಸಲು ಮುಂದಾಗಿರುವುದು ಶ್ಲಾಘನೀಯ. ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು,” ಎಂದು ಕರೆ ನೀಡಿದರು.

ಸುವರ್ಣ ಮಹೋತ್ಸವದ ಈ ಸಂಭ್ರಮದ ಸಂದರ್ಭದಲ್ಲಿ ಶಾಲೆಯ ಪ್ರಥಮ ವಿದ್ಯಾರ್ಥಿ ಅಭಿಜೀತ್ ಶಾ ಮತ್ತು ಪ್ರಥಮ ಪ್ರಾಚಾರ್ಯೆ ಶ್ರೀಮತಿ ರಾಬಿನ್ಸನ್ ಅವರನ್ನು ಗೌರವಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಅಂತರಾಷ್ಟ್ರೀಯ ಶರೀರ ಸೌಷ್ಠವ ಪಟು ವೆಂಕಟೇಶ್ ಕಿಶೋರ್ ತಹಶೀಲ್ದಾರ್, ಹಳೆಯ ವಿದ್ಯಾರ್ಥಿಗಳಾದ ಮನೋಜ್ ಸುತಾರ್ ಮತ್ತು ನಂದೂ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಖೇಲೋ ಇಂಡಿಯಾದ ಸ್ಟಾರ್ ಆಟಗಾರ್ತಿ ಸಿದ್ಧಿ ಅಂಗಡಿ, ಶಾಲೆಯ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಮಹಾನಗರ ಪಾಲಿಕೆಯ ಲಕ್ಷ್ಮಿ ಸುಳಗೆಕರ್ ಮತ್ತು ಮಿಲಿಂದ್ ಸುಳಗೆಕರ್ ದಂಪತಿಗಳನ್ನು ಅತಿಥಿಗಳ ಹಸ್ತದಿಂದ ಗೌರವಿಸಲಾಯಿತು. ಇದೇ ವೇಳೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹಾಕಿ ಆಟಗಾರರು ಹಾಗೂ ರಾಷ್ಟ್ರ ಮಟ್ಟದ ಈಜುಗಾರರನ್ನು  ಅಭಿನಂದಿಸಲಾಯಿತು.

ಸುವರ್ಣ ಮಹೋತ್ಸವದ ಮುಖ್ಯ ಅತಿಥಿಯಾದ ಪದ್ಮಶ್ರೀ ಉಜ್ವಲ್ ದೇವರಾವ್ ನಿಕಮ್ ಅವರು ತಡವಾಗಿ ಆಗಮಿಸಿದ ಕಾರಣದಿಂದಾಗಿ ಅವರ ಕಾರ್ಯಕ್ರಮ ಎರಡನೇ ಅಧಿವೇಶನದಲ್ಲಿ ನಡೆಯಿತು. ಡಾ. ನವೀನಾ ಶೆಟ್ಟಿಗಾರ್ ಅವರು ಅವರನ್ನು ಸ್ವಾಗತಿಸಿದ ನಂತರ, ವೈಷ್ಣವಿ ದವಣಿ ಅವರು ಅವರ ಪರಿಚಯವನ್ನು ಮಾಡಿಕೊಟ್ಟರು. ನಿಕಮ್ ಅವರನ್ನು ಸಂಸ್ಥೆಯ ಅಧ್ಯಕ್ಷರಾದ ಅಡ್ವೊಕೇಟ್ ಚಂದ್ರಹಾಸ್ ಅಣವೇಕರ್ ಅವರು ಸನ್ಮಾನಿಸಿದರು. ಸುವರ್ಣ ಮಹೋತ್ಸವದ ಅಂಗವಾಗಿ ಸಿದ್ಧಪಡಿಸಲಾದ ಸ್ಮರಣಿಕೆಯ ಬಿಡುಗಡೆಯನ್ನು ಉಜ್ವಲ್ ನಿಕಮ್ ಅವರು ಬಿಡುಗಡೆ ಮಾಡಿದರು.  ಉಜ್ವಲ್ ನಿಕಮ್ ಅವರ ಭಾಷಣದ ನಂತರ ಚಂದ್ರಹಾಸ್ ಅಣವೇಕರ್ ಅವರು ಅಧ್ಯಕ್ಷೀಯ ಸಮಾರೋಪ ಭಾಷಣ ಮಾಡಿದರು.

ಕಳೆದ 50 ವರ್ಷಗಳ ಅವಧಿಯಲ್ಲಿ ನಮ್ಮ ಶಾಲೆಯ ಶಿಕ್ಷಕರು ತ್ಯಾಗಭಾವದಿಂದ ಕಾರ್ಯನಿರ್ವಹಿಸಿದ ಪರಿಣಾಮವಾಗಿ ನಮ್ಮ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಮಿಂಚಿದ್ದಾರೆ. ಆ ಎಲ್ಲಾ ಶಿಕ್ಷಕ ವರ್ಗದ ಪ್ರತಿ ಕೃತಜ್ಞತೆ ವ್ಯಕ್ತಪಡಿಸುತ್ತಾ, ಇಂತಹ ಸೇವೆಯನ್ನು ಮುಂದಿನ ಅನೇಕ ವರ್ಷಗಳಿಗೂ ಮುಂದುವರಿಸಬೇಕಾಗಿದೆ. ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದು ನಮ್ಮ ಸಂಕಲ್ಪವಾಗಿದೆ ಎಂದು ಅಣವೇಕರ್  ಅವರು ಹೇಳಿದರು. ಬಳಿಕ ಅತಿಥಿಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಭಾಷಣವನ್ನು ಅವರು ಮುಕ್ತಾಯಗೊಳಿಸಿದರು.

ಶಾಲಾ ಮಂತ್ರಿಮಂಡಲದ ಪ್ರಧಾನ ಮಂತ್ರಿ ವೈಷ್ಣವಿ ಇಟ್ನಾಳ್ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಮಾರಂಭದಲ್ಲಿ ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article