ಬಳ್ಳಾರಿ25..: ‘ಸಾಹಿತ್ಯ ಪ್ರಿಯರು ಹಾಗೂ ಸಾಹಿತ್ಯಕ್ಕೆ ಕೊರತೆ ಇಲ್ಲ. ಕಾರ್ಯಕಾರಣ ಸಂಬಂಧ ಪುಸ್ತಕಗಳು ಮನೆಮನೆಗೆ ತಲುಪಿ ಅವು ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಡೆದ ‘ಮನೆಗೊಂದು ಗ್ರಂಥಾಲಯ’ ಹಾಗೂ ಜಿಲ್ಲಾ ಜಾಗೃತ ಸಮಿತಿ ರಚನಾ ಸಮಿತಿ ಸಭೆಯನ್ನು ಬಳ್ಳಾರಿಯ ಕನ್ನಡ ಭವನದಲ್ಲಿ ಉದ್ಧಾಟಿಸಿ ಮಾತನಾಡಿದರು.
‘ಭಾನು ಮುಷ್ತಾಕ್ ಅವರ ಹಾರ್ಟಲ್ಯಾಂಪ್ ಕೃತಿ ₹5 ಕೋಟಿ ವಹಿವಾಟು ಮಾಡಿದೆ ಎಂದರೆ ಪುಸ್ತಕಗಳಿಗೆ ಎಷ್ಟು ಬೇಡಿಕೆ ಇದೆ ಎಂದು ಅರಿಯಬಹುದು’ ಎ೦ದು ಸಂತಸ ವ್ಯಕ್ತಪಡಿಸಿದರು.
‘ಕನ್ನಡ ಪುಸ್ತಕ ಪ್ರಾಧಿಕಾರವು ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದೆ’ ಎಂದು ತಿಳಿಸಿದರು.
‘ಅಂಗಳದಲ್ಲಿ ತಿಂಗಳ ಪುಸ್ತಕ ಹಾಗೂ ಮನೆಗೊಂದು ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಪುಸ್ತಕಗಳು ತಲುಪುವ ಕೆಲಸ ಪ್ರಾಧಿಕಾರ ಮಾಡುತ್ತಿದೆ’ ಎಂದರು.
ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ,’ ಮನೆಮನೆಗೆ ಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ಎರಡು ದಿನಗಳ ಪುಸ್ತಕ ಮೇಳ ಆಯೋಜಿಸಬೇಕು’ ಎಂದು ಒತ್ತಾಯಿಸಿದರು.
ಮನೆಗೊಂದು ಗ್ರಂಥಾಲಯ ಬಳ್ಳಾರಿ ಜಿಲ್ಲಾ ಜಾಗೃತ ಸಮಿತಿ ರಚಿಸಿ, ಹತ್ತು ಜನರಿಗೆ ಅರ್ಹತಾ ಪತ್ರ ವಿತರಿಸಲಾಯಿತು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ ನಾಗರಾಜ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಅಬ್ದುಲ್ ಹೈ, ತೋರಣಗಲ್ಲು, ವಿಶ್ರಾಂತ ಗ್ರಂಥಪಾಲಕ ಡಾ. ಬಸವರಾಜ ಗದಗಿನ, ಕಥೆಗಾರ ವೀರೇಂದ್ರ ರಾವಿಹಾಳ್, ಕವಿ ದಸ್ತಗಿರಿ ಸಾಬ್ ದಿನ್ನಿ, ವಿ.ಕೃ.ವಿ ಪ್ರಸಾರಾಂಗದ ನಿರ್ದೇಶಕ ತಿಪ್ಪೇರುದ್ರ, ಅಂಬಿಗರ ಮಂಜುನಾಥ, ಹಾಗೂ ಸಾಹಿತ್ಯಪ್ರಿಯರು ಭಾಗವಹಿಸಿದ್ದರು.


