ಪಾಲಕರು ಮಕ್ಕಳಿಗೆ ಸಮಯ ನೀಡಬೇಕು :ಸಂಗಮೇಶ ಬಬಲೇಶ್ವರ

Hasiru Kranti
ಪಾಲಕರು ಮಕ್ಕಳಿಗೆ ಸಮಯ ನೀಡಬೇಕು :ಸಂಗಮೇಶ ಬಬಲೇಶ್ವರ
WhatsApp Group Join Now
Telegram Group Join Now
ಜಮಖಂಡಿ :ಪಾಲಕರು ಮಕ್ಕಳಿಗೆ ಸಮಯ ನೀಡಿ ಉತ್ತಮ ಸಂಸ್ಕಾರ ಕಲಿಸಿದಾಗ ಮಾತ್ರ ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸಬಹುದು ಎಂದು ರಾಜ್ಯ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಎ. ಬಬಲೇಶ್ವರ ಹೇಳಿದರು.
ಅವರು ಬುಧವಾರ ಸಂಜೆ ನಗರದ ರಾಯಲ್ ಪ್ಯಾಲೇಸ್ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ನಡೆದ 21ನೇ ರಾಯಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ತಂದೆ-ತಾಯಿಗಳನ್ನು ಅನುಕರಣೆ ಮಾಡುವ ಸ್ವಭಾವ ಹೊಂದಿದ್ದು, ಅವರ ನಡೆ-ನುಡಿ ಹಾಗೂ ಆಚರಣೆಗಳು ಮಕ್ಕಳ ಮೇಲೆ ನೇರ ಪರಿಣಾಮ ಬೀರುತ್ತವೆ. ಸದಾ ಉತ್ತಮ ನಡವಳಿಕೆಯನ್ನು ಪಾಲಿಸಿದರೆ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದರು. ಅಜ್ಜ-ಅಜ್ಜಿಯರ ಜೊತೆ ಮಕ್ಕಳನ್ನು ಬೆಳೆಸುವುದರಿಂದ ಮೌಲ್ಯಗಳು ಗಟ್ಟಿಯಾಗುತ್ತವೆ. ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳಾಗಬೇಕು ಎಂದು ಹೇಳಿದರು.
ರಾಜ್ಯ ಬಾಲವಿಕಾಸ ಅಕಾಡೆಮಿಯ ಮೂಲಕ ಅನಾಥ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದ್ದು, ರಾಜ್ಯಾದ್ಯಂತ 128 ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು. ದಿ. ಸಿದ್ದು ನ್ಯಾಮಗೌಡರ ಕನಸಿನ ಕೂಸಾಗಿ ಆರಂಭವಾದ ರಾಯಲ್ ಪ್ಯಾಲೇಸ್ ಶಾಲೆ ಇಂದು ಅರವಿನ ಅರಮನೆಯಂತೆ ಬೆಳೆದಿರುವುದು ಸಂತಸದ ಸಂಗತಿ. ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಸಾಧಿಸಿದ್ದಾರೆ. ಶೇಕಡಾ 95ಕ್ಕಿಂತ ಹೆಚ್ಚು ಅಂಕಗಳನ್ನು 7 ವಿದ್ಯಾರ್ಥಿಗಳು, ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು 16 ವಿದ್ಯಾರ್ಥಿಗಳು, ಶೇಕಡಾ 80ಕ್ಕಿಂತ ಹೆಚ್ಚು ಅಂಕಗಳನ್ನು 27 ವಿದ್ಯಾರ್ಥಿಗಳು ಹಾಗೂ ಶೇಕಡಾ 70ಕ್ಕಿಂತ ಹೆಚ್ಚು ಅಂಕಗಳನ್ನು 16 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಹೇಳಿದರು.
ಕ್ರೀಡಾಕೂಟಗಳಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, 16 ವರ್ಷದೊಳಗಿನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ಕ್ರಿಕೆಟ್‌ನಲ್ಲಿ (ಕೆಎಸ್‌ಸಿಎ) ಆಯ್ಕೆಯಾಗಿದ್ದಾರೆ. ಶಿಕ್ಷಕರು ಹಾಗೂ ಪಾಲಕರು ಒಟ್ಟಾಗಿ ಮಕ್ಕಳ ಉತ್ತಮ ಭವಿಷ್ಯ ರೂಪಿಸಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀಮತಿ ಸುಮಿತ್ರಾ ಸಿದ್ದು ನ್ಯಾಮಗೌಡ, ಶಾಲೆಯ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ರೊಳ್ಳಿ ಹಾಗೂ ಪ್ರಾಚಾರ್ಯ ರೀಟಾ ಜೈನರ್ ಉಪಸ್ಥಿತರಿದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
WhatsApp Group Join Now
Telegram Group Join Now
Share This Article