ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಿನ್ನೆ ತಡ ರಾತ್ರಿ (ದಿ. ೨೫ರಂದು) ಖಾಸಗಿ ಟ್ರಾವೆಲ್ಸನ ಬಸ್ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ಪರಿಣಾಮ 9 ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ.
ಈ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ್ದು, ಹಿರಿಯೂರಿನ ಜವನಗೊಂಡನಹಳ್ಳಿಯ ಗೊರ್ಲತ್ತು ಕ್ರಾಸ್ ಬಳಿ ಎದುರಿನಿಂದ ಡಿವೈಡರ್ ದಾಟಿ ಬಂದ ಲಾರಿಯು ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್ ಎರಡಕ್ಕೂ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಬಸ್ನಲ್ಲಿದ್ದ 8ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಅಷ್ಟೇ ಅಲ್ಲದೆ, ಲಾರಿ ಚಾಲಕ ಕೂಡ ಸಜೀವ ದಹನವಾಗಿದ್ದಾನೆ. ಬಸ್ನಲ್ಲಿದ್ದ ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

12 ಜನ ಗಾಯಳುಗಳು ಹಿರಿಯೂರು ಆಸ್ಪತ್ರೆ, 9 ಜನ ಶಿರಾ ಆಸ್ಪತ್ರೆ ಹಾಗೂ ಮೂವರು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಪ್ರಯಾಣಿಕನಿಗೆ ಹೆಚ್ಚು ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಆಗಿರುವ ಪ್ರಯಾಣಿಕನ ಹೊರತಾಗಿ ಒಟ್ಟು 24 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್ನಲ್ಲಿದ್ದ ಒಟ್ಟು 32 ಜನ ಪೈಕಿ 8 ಜನರ ಜೊತೆಗೆ ಪುಟ್ಟ ಮಗುವಿನ ಶವ ಇದೆ ಎಂದು ತಿಳಿದಿದೆ. ಮೃತರ ಡಿಎನ್ಎ ಪರೀಕ್ಷೆ ಮಾಡಿ, ಬಳಿಕ ಶವಗಳನ್ನು ಹಸ್ತಾಂತರ ಮಾಡುತ್ತೇವೆ ಎಂದು ಐಜಿಪಿ ರವಿಕಾಂತೇಗೌಡ ಅವರು ತಿಳಿಸಿದ್ದಾರೆ.
ಘಟನೆ ಕುರಿತು ಐಜಿಪಿ ರವಿಕಾಂತೇಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಬಸ್ಸಿನಿಂದ 7 ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ ಒಟ್ಟು 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಹೇಳಿದ್ದಾರೆ.

ದಾಂಡೇಲಿಗೆ ತೆರಳುತ್ತಿದ್ದ 42 ಜನ ಮಕ್ಕಳಿದ್ದ ಬಸ್ ಸೇಫ್: ”ಇದೇ ಸಂದರ್ಭದಲ್ಲಿ, ಅಪಘಾತವಾಗಿ ಸುಟ್ಟು ಕರಕಲಾಗಿರುವ ಬಸ್ ಸರಿಸಮವಾಗಿ ಚಲಿಸುತ್ತಿದ್ದ ಶಾಲಾ ಮಕ್ಕಳ ಪ್ರವಾಸದ ಬಸ್ ದಾಂಡೇಲಿಗೆ ತೆರಳುತ್ತಿತ್ತು. ಅಪಘಾತವಾದ ಬಸ್ ಮಕ್ಕಳ ಬಸ್ಗೆ ಟಚ್ ಆಗಿದೆ. ಇದರಿಂದ ಮಕ್ಕಳಿದ್ದ ಬಸ್ ರಾಷ್ಟ್ರೀಯ ಹೆದ್ದಾರಿ ದಾಟಿ, ಚರಂಡಿಗೆ ಹೋಗಿ ನಿಂತಿದೆ. ಅ ಬಸ್ನಲ್ಲಿದ್ದ 42 ಮಕ್ಕಳು ಸುರಕ್ಷಿತವಾಗಿದ್ದಾರೆ. ಮಕ್ಕಳಿದ್ದ ಬಸ್ನ ಚಾಲಕ, ಘಟನೆಯ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಪಡೆದಿದ್ದೇವೆ” ಎಂದು ಐಜಿಪಿ ರವಿಕಾಂತೇಗೌಡ ಹೇಳಿದರು.

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ
ಚಿತ್ರದುರ್ಗದ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ಗೆ ಬೆಂಕಿ ಹೊತ್ತಿಕೊಂಡು 9ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪ್ರಧಾನಿ ಮೋದಿ, ಸಿಎಂ ಸಿದ್ಧರಾಮಯ್ಯ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ₹5 ಲಕ್ಷ, ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಪ್ರಧಾನಿ ಮೋದಿ ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ
ಚಿತ್ರದುರ್ಗದ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50,000 ರೂ. ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.


