ಚಿತ್ರರಂಗದ ಚಾಕೋಲೇಟ್ ಬಾಯ್ ಧರ್ಮಕೀರ್ತಿರಾಜ್ ನಾಯಕತ್ವದ 25ನೇ ಚಿತ್ರ ’ನಯನ ಮನೋಹರ’’ ಸಿನಿಮಾದ ಶೀರ್ಷಿಕೆ ಅನಾವರಣ ಮತ್ತು ಟೀಸರ್ ಬಿಡುಗಡೆ ಕಾರ್ಯಕ್ರಮವು ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಂಗಳೂರು ಮೂಲದ ಯುವ ಉದ್ಯಮಿ, ಬಿಲ್ಡರ್ ಅನುಷ್ ಸಿದ್ದಪ್ಪ ಕನ್ನಡ ಚಿತ್ರರಂಗಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಅಭಿಲಾಷೆಯಿಂದ ‘ನಯನ ಮನೋಹರ’ ಚಿತ್ರವನ್ನು ತಮ್ಮದೇ ಎಕ್ಸ್ಕ್ವಿಸೈಟ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಯುವ ಪ್ರತಿಭೆ ನಿರ್ದೇಶಕ ಪುನೀತ್ ಕೆಜಿಆರ್* ಚೊಚ್ಚಲ ಚಿತ್ರಕ್ಕೆ ತಮ್ಮದೇ ’ಲಾಸ್ಟ್ ಬೆಂಚ್ ವಂಡರ್ಸ್ ಸಿನ್ಸ್ 1990’ ತಂಡದೊಂದಿಗೆ ನಿರ್ದೇಶನ ಮಾಡುತ್ತಿದ್ದು, ’ಇದು ನಿಮ್ಮನ್ನು ನಿಮಗೆ ಪರಿಚಯಿಸುವ ಸುಂದರ ಕಾವ್ಯ’ ಎಂಬ ಶೀರ್ಷಿಕೆಯ ಅರ್ಥಪೂರ್ಣ ಅಡಿಬರಹ
ವಿಶೇಷವಾಗಿದೆ.
“ಅಪ್ಪ, ಅಮ್ಮ, ಅಕ್ಕ ಬಂದಿರುವುದು ನನಗೆ ಶಕ್ತಿ ಬಂದಿದೆ. ಎಲ್ಲರೂ ಸಮಯ ಬಿಡುವು ಮಾಡಿಕೊಂಡು ತಂಡಕ್ಕೆ ಹರಸಲು ಆಗಮಿಸಿದಕ್ಕೆ ತುಂಬಾ ಥ್ಯಾಂಕ್ಸ್. 25ನೇ ಫಿಲಂ ಮೈಲ್‌ಸ್ಟೋನ್ ಅಂತ ಹೇಳಬಹುದು. ಮೇಜರ್ ಹೀರೋ ಅಂದರೆ ನಿರ್ಮಾಪಕರು. ನನ್ನ ಲುಕ್ಕಿಗೆ ಅವರೇ ಕಾರಣ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಖುಷಿ ಆಯಿತು. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ಪ್ರಿಯಾಂಕ ಮೇಡಂ ಜತೆಗೆ ’ವೈರಸ್’ನಲ್ಲಿ ನಟಿಸಿದ್ದೇನೆ. ಅವರು ತುಂಬಾ ಸರಳವ್ಯಕ್ತಿ. ಗೆಳೆಯ ವಿನೋಧ್ ಪ್ರಭಾಕರ್ ಮೊದಲಿನಿಂದಲೂ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಏನೇ ತಪ್ಪು ಮಾಡಿದರೂ, ಮನೆಗೆ ಕರೆಸಿಕೊಂಡು ಬುದ್ದಿವಾದ ಹೇಳುತ್ತಾರೆ. ಸುಮಾರು ಸಲ ಲುಕ್ ಚೇಂಜ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದು ನನಗೆ ಹೆಸರು ತಂದುಕೊಡುತ್ತದೆಂಬ ನಂಬಿಕೆ ಇದೆ” ಅಂತ ಧರ್ಮಕೀರ್ತಿರಾಜ್ “ಎಲ್ಲರಿಗೂ ಥ್ಯಾಂಕ್ಸ್” ಎನ್ನುತ್ತಾ ಮೈಕ್‌ನ್ನು ಹಸ್ತಾಂತರಿಸಿದರು.
ನಿರ್ದೇಶಕರು ಹೇಳುವಂತೆ “ಈಗಲೇ ಏನನ್ನು ಹೇಳಲಾಗದು. ಸಿನಿಮಾ ಯಾವ ರೀತಿ ಇರುತ್ತದೆಂದು ಟೀಸರ್ ಅಲ್ಲದೆ ಪೋಸ್ಟರ್‌ದಲ್ಲಿ ಸಣ್ಣದೊಂದು ಸುಳಿವು ನೀಡಿದ್ದೇನೆ. ಖಂಡಿತ ಭರವಸೆ ಕಾಪಾಡುತ್ತೇನೆ. ’ನಮ’ ಎಲ್ಲರಿಗೂ ತಲುಪುವಂತೆ ಮಾಡುತ್ತೇನೆ. ಧರ್ಮ ಸರ್‌ಗೆ ಗೆಲುವು ಕೊಡುತ್ತದೆ” ಎಂಬ ಆಶಾಭಾವನೆ ವ್ಯಕ್ತಪಡಿಸಿ, ನಾಯಕಿ ಇನ್ನುಳಿದಂತೆ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಸಿನಿಮಾದ ಕುರಿತಂತೆ ಪುನೀತ್.ಕೆಜಿಆರ್ ಗೌಪ್ಯತೆ ಕಾಪಾಡಿಕೊಂಡರು.
ನಿರ್ಮಾಪಕ ಅನುಷ್ ಸಿದ್ದಪ್ಪ ಅತಿಥಿಗಳು, ಕಾರ್ಯಕ್ರಮ ರೂಪರೇಷೆಯಲ್ಲಿ ತಲ್ಲೀನರಾಗಿದ್ದರಿಂದ ಮಿತಭಾಷಿಯಾಗಿ “ಮೊದಲ ಪ್ರಯತ್ನ. ನಿಮ್ಮಗಳ ಆರ್ಶಿವಾದ ಬೇಕು” ಎಂದು ಕೋರಿಕೊಂಡರು.
ಪ್ರಿಯಾಂಕ ಉಪೇಂದ್ರ ಮತ್ತು ವಿನೋಧ್ ಪ್ರಭಾಕರ್ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, “ಸಿನಿಮಾ 100ನೇ ಪ್ರದರ್ಶನ ಕಂಡು ಇದೇ ಜಾಗದಲ್ಲಿ ಸಂಭ್ರಮಿಸೋಣ. ನಿರ್ಮಾಪಕರ ಟೇಸ್ಟ್ ತುಣುಕುಗಳಲ್ಲಿ ಕಂಡುಬಂದಿದೆ. ಟೀಸರ್‌ನಲ್ಲಿರುವಂತೆ ಚಿತ್ರ ಮಾಡಿ. ಕನ್ನಡ ಇಂಡಸ್ರ್ಟಿ ಯಾವುದರಲ್ಲೂ ಕಮ್ಮಿ ಇಲ್ಲ. ಮೊದಲು ಕನ್ನಡ ಚಿತ್ರ ನೋಡಿ. ನಂತರ ಬೇರೆ ಭಾಷೆಯ ಕಡೆ ಗಮನ ಕೊಡಿ” ಎಂದು ಹೇಳಿದರು.
“ಗೆಳೆಯನನ್ನು ನವಗ್ರಹ ಚಿತ್ರದಿಂದ ನೋಡುತ್ತಾ ಬಂದಿದ್ದೇನೆ. ನಾನು ಸಿಕ್ಸ್ ಮಾಡಿದ ನಂತರ, ಉದ್ಯಮದಲ್ಲೆ ಬೇರೆ ತರಹ ಕಾಣಿಸಿಕೊಳ್ಳಬೇಕೆಂದು ತೀರ್ಮಾನಕ್ಕೆ ಬಂದೆ. ನೀನು ಬದಲಾವಣೆ ಆಗಬೇಕೆಂದು ಹೇಳುತ್ತಿರುತ್ತೇನೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಲೇ ಬೇಕು. ಇಲ್ಲದಿದ್ದರೆ ಬಹಳ ಕಷ್ಟ. ಟೀಸರ್ ಚೆನ್ನಾಗಿ ಬಂದಿದೆ. ಉತ್ತಮ ಸಿನಿಮಾ ಇದಾಗಲಿದೆ ಅಂತ ಅನಿಸಿದೆ. ಪಾತ್ರದ ಪರಿಚಯ ಚೆನ್ನಾಗಿ ಮಾಡಿದ್ದೀರ. ಧರ್ಮನನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದೀರ. ಮುಂದೆ ಒಳ್ಳೆ ಸಿನಿಮಾಗಳನ್ನು ಮಾಡಿ. ನಿನಗೆ ಸಾಮರ್ಥ್ಯ ಇದೆ. ಒಳ್ಳೆಯ ಸಿನಿಮಾ ಕೊಟ್ಟರೆ ಕನ್ನಡದ ಜನ ಗೆಲ್ಲಿಸುತ್ತಾರೆ. ಅದಕ್ಕೆ ಸಾಕ್ಷಿ ಮಾದೇವ ಕಣ್ಣ ಮುಂದಿದೆ. ನಿಮಗೆಲ್ಲರಿಗೂ ಗೆಲುವು ಸಿಗಲಿ” ಎಂದು ವಿನೋಧ್ ಪ್ರಭಾಕರ್ ಶುಭಹಾರೈಸಿದರು.
ಕಲಾವಿದರಾದ ನವೀನ್ ಶಂಕರ್, ಸಿಂಧೂ ಲೋಕನಾಥ್, ಮಯೂರಿ, ಅನುಷಾ ರೈ, ಶಿಶಿರ್, ಐಶ್ವರ್ಯ ಸಿಂಧೂಗಿ, ಚಂದನ ಅನಂತಕೃಷ, ಸಿರಿ, ತ್ರಿಶಾ, ತೆಲುಗು ಬಿಗ್‌ಬಾಸ್ ವಿನ್ನರ್ ನಿಖಿಲ್ ಮುಂತಾದವರು ಆಗಮಿಸಿ ‘ನಯನ ಮನೋಹರ’ ಚಿತ್ರಕ್ಕೆ ಶುಭ ಹಾರೈಸಿದರು


