ಮನಸ್ಸನ್ನು ಖುಷಿ ಪಡಿಸುವಂತಹ ಶೀರ್ಷಿಕೆ ‘ಸುಖೀಭವ’ ಚಿತ್ರಕ್ಕೆ ದಂಪತಿಗಳಾದ ಸಂತೋಷ್ ಕುಮಾರ್-ಭಾರ್ಗವಿ ಸಂತೋಷ್ ನಿರ್ಮಾಪಕರು. ಇವರಿಗೆ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಸ್ನೇಹಿತರು. ಗೆಳೆಯನ ಸ್ಪೂರ್ತಿ ಹಾಗೂ ಹಿತೈಷಿಯಾಗಿದ್ದರಿಂದಲೇ ಧೈರ್ಯ ಮಾಡಿ ಪುತ್ರರ ಹೆಸರುಗಳಾದ ವೇದ್ ಆರ್ಯನ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
ಇವರ ತಾತಾ 80ರ ದಶಕದಲ್ಲಿ ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದೇ ವಂಶದ ಕುಡಿಯಾಗಿರುವ ಸಂತೋಷ್ಕುಮಾರ್ ಲಂಡನ್ನಲ್ಲಿ ಶಿಕ್ಷಣ ಮುಗಿಸಿ, ನಂತರ ಭಾಷೆಯ ಮೇಲಿನ ಅಭಿಮಾನದಿಂದ ಕನ್ನಡ ಸಿನಿಮಾಕ್ಕೆ ಹಣ ಹಾಕಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಅನೇಕರ ಬಳಿ ಸಹಾಯಕರಾಗಿ ಗುರುತಿಸಿಕೊಂಡಿದ್ದ ಮೈಸೂರು ಮೂಲದ ಎನ್.ಕೆ.ರಾಜೇಶ್ ನಾಯ್ಡು ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ‘ಸುಖೀಭವ’ಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸದಾ ಹೊಸಬರಿಗೆ ಪ್ರೋತ್ಸಾಹ ಕೊಡುತ್ತಿರುವ ನಟ ಶರಣ್ ಈ ಸಿನಿಮಾಕ್ಕೂ ಎಣ್ಣೆ ಹಾಡು ಕುರಿತಾದ ’ಬೇಡ ಮಚ್ಚಾ ಬೇಡ’ ಸಾಲಿನ ಗೀತೆಗೆ ಧ್ವನಿಯಾಗಿ ಶುಭ ಹಾರೈಸಿರುವುದು ತಂಡಕ್ಕೆ ಶಕ್ತಿ ಬಂದಿದೆ. ಸಿನಿಮಾವು ಫ್ಯಾಮಿಲಿ ಕಥೆಯನ್ನು ಹೊಂದಿದ್ದು, ಮಿಕ್ಕಂತೆ ವಿಷಯಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.
ಬೆಂಗಳೂರಿನ ಮಹೇಂದ್ರ ನಾಯಕ. ಸುಶ್ಮಿತ ನಾಯಕ್ ಹಾಗೂ ವಿಯಾನ್ಶಿಗ್ಡೆ ನಾಯಕಿಯರು. ಉಳಿದಂತೆ ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು, ಮೈತ್ರಿ ಜಗ್ಗಿ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಬಿ.ಜೆ.ಭರತ್-ಶುಭಂ, ಛಾಯಾಗ್ರಹಣ ಮಂಜುನಾಥ್ ನಾಯಕ್ ಅವರದಾಗಿದೆ. ಪ್ರಚಾರದ ಮೊದಲ ಹಂತವಾಗಿ ಕ್ರಿಸ್ಮಸ್ ಹಬ್ಬದ ಸಲುವಾಗಿ ತಂಡವು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.


