ಸ್ವಾಮಿತ್ವ ಯೋಜನೆ: ದೇವರಶೀಗಿಹಳ್ಳಿ ಗ್ರಾಮಸ್ಥರಿಗೆ ಆಸ್ತಿ ಹಕ್ಕಿನ ಭದ್ರತೆ – ಡ್ರೋನ್ ಸರ್ವೆ ಆರಂಭ!

Hasiru Kranti
ಸ್ವಾಮಿತ್ವ ಯೋಜನೆ: ದೇವರಶೀಗಿಹಳ್ಳಿ ಗ್ರಾಮಸ್ಥರಿಗೆ ಆಸ್ತಿ ಹಕ್ಕಿನ ಭದ್ರತೆ – ಡ್ರೋನ್ ಸರ್ವೆ ಆರಂಭ!
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಗ್ರಾಮೀಣ ಪ್ರದೇಶದ ಮನೆ ಮಾಲೀಕರಿಗೆ ಕಾನೂನು ಭದ್ರತೆ ಒದಗಿಸುವ ಮಹತ್ವಕಾಂಕ್ಷಿ ಸ್ವಾಮಿತ್ವ (SVAMITVA) ಸರ್ವೆ ಯೋಜನೆಗೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಚಾಲನೆ ನೀಡಲಾಗಿದೆ. ಈ ಐತಿಹಾಸಿಕ ಯೋಜನೆಯು ಮನೆ ಮಾಲೀಕರಿಗೆ ಭವಿಷ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಲಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಮಸಳಿ ಅವರು ಅಭಿಪ್ರಾಯಪಟ್ಟರು.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ:

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ ಈ ಯೋಜನೆಯಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳೊಂದಿಗೆ ಭೂಮಾಪನ ಇಲಾಖೆ ಕಾರ್ಯನಿರ್ವಹಿಸಲಿದೆ. ಗ್ರಾಮ ಠಾಣಾ ಪ್ರದೇಶದಲ್ಲಿರುವ ವಾಸದ ಮನೆಗಳ ಗಡಿಗಳನ್ನು ನಿಖರವಾಗಿ ಗುರುತಿಸಲು ಅತ್ಯಾಧುನಿಕ ಡ್ರೋನ್ ಮತ್ತು ರೋವರ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸರ್ವೆ ಪೂರ್ಣಗೊಂಡ ನಂತರ ಮನೆ ಮಾಲೀಕರಿಗೆ ಸ್ವಾಮಿತ್ವ ಕಾರ್ಡ್ (ಪ್ರಾಪರ್ಟಿ ಕಾರ್ಡ್) ವಿತರಿಸಲಾಗುವುದು. ಇದು ಮನೆಯ ಮೇಲಿನ ಕಾನೂನು ಮಾನ್ಯ ದಾಖಲೆಯಾಗಿದ್ದು, ಆಸ್ತಿ-ಗಡಿ ಸಂಬಂಧಿತ ವಿವಾದಗಳಿಗೆ ಶಾಶ್ವತ ಪರಿಹಾರ ನೀಡಲಿದೆ,” ಎಂದು ಮಾಹಿತಿ ನೀಡಿದರು. ಕಿತ್ತೂರು ತಾಲೂಕಿನಲ್ಲಿ ದೇವರಶೀಗಿಹಳ್ಳಿಯಿಂದ ಈ ಸರ್ವೆ ಕಾರ್ಯ ಆರಂಭಗೊಂಡಿರುವುದು ವಿಶೇಷ ಎಂದರು.

ಸಹಾಯಕ ನಿರ್ದೇಶಕ (ಭೂಮಿ ದಾಖಲೆಗಳು) ಅಶೋಕ ಹೊಸಕೇರಿ ಅವರು ಮಾತನಾಡಿ, ಈ ಯೋಜನೆ ಕೃಷಿ ಭೂಮಿಗೆ ಅನ್ವಯಿಸುವುದಿಲ್ಲ, ಬದಲಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಾಸದ ಮನೆಗಳು ಮತ್ತು ಅಬಾದಿ ಪ್ರದೇಶದ ಆಸ್ತಿಗಳಿಗೆ ಮಾತ್ರ ಸೀಮಿತ. ಸರ್ವೆ ಮುಗಿದ ನಂತರ ಗ್ರಾಮ ಪಂಚಾಯತಿಗಳಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಸಾಧ್ಯವಾಗುತ್ತದೆ. ಇದರಿಂದ ಸ್ವತ್ತು ದಾಖಲೆಗಳು ಮನೆ-ಮನೆಗೆ ತಲುಪಲಿವೆ. ಈ ದಾಖಲೆಗಳ ಆಧಾರದ ಮೇಲೆ ಗ್ರಾಮೀಣ ಜನತೆ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಪಡೆಯಲು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಇದು ಗ್ರಾಮೀಣ ಆರ್ಥಿಕತೆಗೆ ಹೊಸ ಬಲ ನೀಡಲಿದೆ ಎಂದು ತಿಳಿಸಿದರು.

 

ಸರ್ವೆ ಕಾರ್ಯದ ಯಶಸ್ಸಿಗಾಗಿ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅಧಿಕಾರಿಗಳು ಮನವಿ ಮಾಡಿದರು.

ಮಾಲೀಕರ ಉಪಸ್ಥಿತಿ ಕಡ್ಡಾಯ: ಸರ್ವೆ ನಡೆಯುವ ವೇಳೆ ಮನೆ ಮಾಲೀಕರು ಸ್ಥಳದಲ್ಲಿ ಹಾಜರಿರಬೇಕು.

ದಾಖಲೆ ಸಲ್ಲಿಕೆ: ಹಳೆಯ ತೆರಿಗೆ ರಸೀದಿ, ಮನೆ ಸಂಖ್ಯೆ ಅಥವಾ ಲಭ್ಯವಿರುವ ಇತರೆ ದಾಖಲೆಗಳನ್ನು ಸರ್ವೆ ಸಿಬ್ಬಂದಿಗೆ ತೋರಿಸಬೇಕು.

ತಕರಾರು ನಿವಾರಣೆ: ಗಡಿ ಕುರಿತ ಯಾವುದೇ ತಕರಾರುಗಳಿದ್ದಲ್ಲಿ ತಕ್ಷಣವೇ ಸರ್ವೆ ತಂಡದ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಬಡಿಗೇರ, ಉಪಾಧ್ಯಕ್ಷೆ ವಿಜಯಾ ಹಂಚಿನಮನಿ, ಪಿಡಿಓ ವಿನಯಕುಮಾರ ಕೊರವಿ, ತಾಪಂ ಸಿಬ್ಬಂದಿ ಲಿಂಗರಾಜ ಹಲಕರ್ಣಿಮಠ, ಸಂಗನಗೌಡ ಹಂದರಾಳ, ಸರ್ವೆ ಸಿಬ್ಬಂದಿ ಜಯಂತ ಪಾಟೀಲ ಸೇರಿದಂತೆ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

 

WhatsApp Group Join Now
Telegram Group Join Now
Share This Article