ಬಿ.ಕೆ. ಮಾಡೆಲ್ ಹೈಸ್ಕೂಲ್ನ ಶತಮಾನೋತ್ಸವದ ಇಂದಿನ ಕಾರ್ಯಕ್ರಮದಲ್ಲಿ ಡಾ. ಮೀನಾ ಚಂದಾವರಕರ ಅವರೊಂದಿಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಸಾವಯವ ಕೃಷಿ ತಜ್ಞ ಕೆ.ಇ.ಎನ್. ರಾಘವನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಚಂದಾವರಕರ, “ಇಚ್ಛಾಶಕ್ತಿ, ಕಾರ್ಯಶಕ್ತಿ ಮತ್ತು ಜ್ಞಾನಶಕ್ತಿಯೊಂದಿಗೆ ಅಪಾರವಾದ ಉತ್ಸಾಹದ ಶಕ್ತಿ ಈ ಶಾಲೆಯ ಕಾರ್ಯದಲ್ಲಿ ಕಂಡುಬರುತ್ತದೆ. ಸರಿಯಾದ ವಾತಾವರಣವಿದ್ದಾಗ ಮಾತ್ರ ಮಳೆಬಿಲ್ಲು ಮೂಡಲು ಸಾಧ್ಯ. ಅದೇ ರೀತಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಅತ್ಯಗತ್ಯವಾಗಿದ್ದು, ಅಂತಹ ವಾತಾವರಣ ಈ ಶಾಲೆಯಲ್ಲಿದೆ. ಶಿಕ್ಷಣದ ಜೊತೆಗೆ ಸಮರ್ಥ ಭಾವಿ ಪೀಳ್ಯೆಯನ್ನು ರೂಪಿಸುವ ಕಾರ್ಯವನ್ನು ಈ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಮಾಡಿದ್ದಾರೆ,” ಎಂದರು.
ಮುಂದುವರಿದು ಮಾತನಾಡುತ್ತಾ, “ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಸಂಸ್ಥೆಯ ಶಾಲೆಗಳಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಮತ್ತು ಮರಾಠಿ ಭಾಷೆಗಳಿಗೆ ಮಹತ್ವ ನೀಡುತ್ತಿರುವುದು ವಿಶೇಷವಾಗಿದೆ. ತ್ಯಾಗ, ಸಮರ್ಪಣೆ ಮತ್ತು ಪರಿಶ್ರಮದ ಮೂಲಕ ಶತಮಾನೋತ್ಸವದತ್ತ ಯಶಸ್ವಿ ಹಾದಿ ಸವೆಸಿದ ಶಾಲೆಯ ಶಿಕ್ಷಕರು ಹಾಗೂ ನಿರ್ದೇಶಕರನ್ನು ಅವರು ಶ್ಲಾಘಿಸಿದರು. ಸಾವಯವ ಕೃಷಿ ತಜ್ಞ ರಾಘವನ್ ಅವರೂ ಕೂಡ ಈ ಸಂದರ್ಭದಲ್ಲಿ ಪ್ರಸ್ತುತ ವಿಚಾರಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಶುಕ್ಲಾಂಬರ ಪತ್ತಾರ ಅವರಿಂದ ಸ್ವಾಗತ ಗೀತೆ ನೆರವೇರಿತು. ಶ್ರೀನಿವಾಸ ಶಿವಣಗಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೋತದಾರ ಅವರು ವಂದಿಸಿದರು. ನಾಳೆ ಬುಧವಾರ ಸಂಜೆ ನಡೆಯಲಿರುವ ಶತಮಾನೋತ್ಸವ ಸಮಾರಂಭದಲ್ಲಿ ಸುಪ್ರಸಿದ್ಧ ನಟ ಸಚಿನ ಪಿಳಗಾಂವಕರ ಉಪಸ್ಥಿತರಿರಲಿದ್ದಾರೆ.


