ಅಥಣಿ : ನಾಡ ವಿರೋಧಿ ಧೋರಣೆ ತಳೆದ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ ಅವರನ್ನು ಸಂಸತ್‌ನಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಕಚೇರಿ ಮುಂದೆ ಮಹಾರಾಷ್ಟ್ರದ ಸಂಸದ ದೈರ್ಯಶೀಲ ಮಾನೆ ಅವರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.
ಕರವೇ ತಾಲೂಕಾಧ್ಯಕ್ಷ ಉದಯ ಮಾಕಾಣಿ ಮಾತನಾಡಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯಲ್ಪಡುವ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯ ಸರ್ಕಾರ ನಡೆಸುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಮಾಡುವ ಮಹಾಮೇಳ ನಡೆಸುವ ಸಮಾವೇಶದಲ್ಲಿ ಪಾಲ್ಗೊಳ್ಳಬಾರದು, ನಾಡವಿರೋಧಿ ಭಾಷಣ ಮಾಡಬಾರದು ಎಂಬ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಅವರು ಧೈರ್ಯಶೀಲ ಮಾನೆ ಅವರು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ. ಇದನ್ನು ಖಂಡಿಸಿ ಧೈರ್ಯಶೀಲ ಅವರು ಲೋಕಸಭೆ ಸ್ಪೀಕರ್‌ಗೆ ಜಿಲ್ಲಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ಹಕ್ಕುಚ್ಯುತಿ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇಂಥ ನಾಡದ್ರೋಹಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಮಾತನಾಡಿ ಬೆಳಗಾವಿ ಗಡಿ ವಿಚಾರವನ್ನು ಕೆಣಕುತ್ತಾ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಮೇಲಿಂದ ಮೇಲೆ ಬೆಳಗಾವಿಯಲ್ಲಿ ಪುಂಡಾಟಕ್ಕೆ ಮಾಡುತ್ತಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಮಹಾ ಮೇಳ, ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಆಚರಣೆಗೆ ಅನುಮತಿ ನೀಡಬಾರದು ಎಂಬ ನಮ್ಮ ಕನ್ನಡಪರ ಹೋರಾಟಗಾರರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಾರಿ ಮಹಾಮೇಳ ನಡೆಸಿದಂತೆ ಕ್ರಮ ಕೈಗೊಂಡಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಎಂಇ ಎಸ್ ಮುಖಂಡರನ್ನು ಪ್ರಚೋದಿಸುವ ನಿಟ್ಟಿನಲ್ಲಿ ಭಾಷಣಕ್ಕೆ ಬರುವ ಮಹಾರಾಷ್ಟ್ರದ ರಾಜಕಾರಣಿಗಳಿಗೆ ಜಿಲ್ಲಾಧಿಕಾರಿಗಳು ನಿರ್ಬಂಧ ಹೀರುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕಾಪಾಡಿದ್ದಾರೆ. ಹಕ್ಕು ಜೊತೆ ಮಾಡುವ ಪ್ರಶ್ನೆ ಬರುವುದಿಲ್ಲ, ಇಂತಹ ಸುಳ್ಳು ಆರೋಪವನ್ನು ಕೇಂದ್ರ ಸರ್ಕಾರ ಪರಿಗಣಿಸಬಾರದು. ನಮ್ಮ ರಾಜ್ಯದ ಎಲ್ಲಾ ಸಂಸದರು ಪಕ್ಷಾತೀತವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಪರವಾಗಿ ಕೇಂದ್ರ ಗೃಹ ಸಚಿವರಿಗೆ ಮನವರಿಕೆ ಮಾಡಬೇಕು. ಸುಳ್ಳು ಆರೋಪ ಮಾಡಿರುವ ಸಂಸದ ಧೈರ್ಯಶೀಲ್ ಮಾನೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜಗನಾಥ ಭಾಮನೆ,ಸುಕಮಾರ ಕಾಂಬಳೆ,ಉದಯ ಮಾಕಾಣಿ,ಮಲ್ಲು ನೂಲಿ,ಸಿದ್ಸು ಹಂಡಗಿ,ರಾಕೇಶ ಸೌದಾಗರ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು


