ಮಹಾಲಿಂಗಪುರ:- ರಾಜ್ಯ ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರು ಸೋಮವಾರ ಬೆಳಗಾವಿಯಲ್ಲಿ ಮಹಾಲಿಂಗಪುರ ನೂತನ ತಾಲೂಕು ಹೋರಾಟಗಾರರ ಟೆಂಟ್ ಗೆ ಆಗಮಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹೋರಾಟ ಸಮಿತಿ ಸಚಿವರಿಗೆ ಮನವರಿಕೆ ಮಾಡುತ್ತಾ, ಕಳೆದ ಅಧಿವೇಶನದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ತಾಲೂಕು ರಚನೆ ಕುರಿತು ಕೇಳಿದ ಪ್ರಶ್ನೆಗೆ ಕಂದಾಯ ಸಚಿವರು ಜಮಖಂಡಿ ತಾಲೂಕಿನಲ್ಲಿ ಈಗಾಗಲೇ ಜಮಖಂಡಿ ಸೇರಿ ಮೂರು ತಾಲೂಕುಗಳು ಇವೆ, ನಾಲ್ಕನೇ ತಾಲೂಕು ರಚನೆಗೆ ಹಳ್ಳಿಗಳ ಕೊರತೆ ಎದುರಾಗಿದ್ದು, ಮಹಾಲಿಂಗಪುರ ಪಟ್ಟಣದ ನೂತನ ತಾಲೂಕು ರಚನೆ ಪ್ರಕ್ರಿಯೆಯನ್ನು ವಿಲೆಗೆ ಹಾಕಲಾಗಿದೆ ಎಂದು ಸದನಕ್ಕೆ ತಿಳಿಸಿದ್ದರು.
ಈ ವಿಷಯದ ಕುರಿತು ಸಚಿವರಿಗೆ ಅಪೂರ್ಣ ಮಾಹಿತಿ ಇದ್ದಂತಿದೆ ನಮ್ಮ ಮಹಾಲಿಂಗಪುರ ಪಟ್ಟಣ ಈ ಮೊದಲು ಮುಧೋಳ ತಾಲೂಕಿನಲ್ಲಿದ್ದು, ಆಡಳಿತಾತ್ಮಕವಾಗಿ (ಕೆಲ ಕಚೇರಿಗಳಿಂದ ಕೆಲಸ ಕಾರ್ಯಗಳು ನಡೆಯುತ್ತಿರುವುದರಿಂದ) ಮಾತ್ರ ರಬಕವಿ/ ಬನಹಟ್ಟಿ ತಾಲೂಕಿನಲ್ಲಿದೆ. ನಮ್ಮದೇನೆ ಇದ್ದರೂ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ನಾಗರಿಕರು ಮುಧೋಳ ತಾಲೂಕಿನ ಹೋಬಳಿ ಮಟ್ಟದಲ್ಲಿ ಮತ್ತು ಮಹಾಲಿಂಗಪುರ ನೂತನ ತಾಲೂಕಿನಲ್ಲಿ ಮುಂದುವರೆಯಲು ಇಚ್ಛಿಸುತ್ತಾರೆ ಎಂದು ಮನವರಿಕೆ ಮಾಡಿದರು.
ವಿಷಯ ಆಲಿಸಿ ಮಾತನಾಡಿದ ಸಚಿವರು, ತಾಲೂಕು ನಿಯೋಗದ ಮನವಿ ಮತ್ತು ಮಹಾಲಿಂಗಪುರ ನೂತನ ತಾಲೂಕಿಗೆ ಇರುವ ಭೌಗೋಳಿಕ ಹಿನ್ನೆಲೆ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನದಟ್ಟು ಮಾಡಿ, ಎರಡು ಮೂರು ದಿನಗಳಲ್ಲಿ ಮತ್ತೆ ಕಂದಾಯ ಸಚಿವರನ್ನೂ ಸಹ ನಿಯೋಗಕ್ಕೆ ಭೇಟಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
೧೩೪೨ ದಿವಸಗಳಿಂದ ನೂತನ ತಾಲೂಕಿಗಾಗಿ ಅನೇಕ ಬಾರಿ ವಿವಿಧ ರೀತಿಯ ಹೋರಾಟ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯರಾದಿಯಾಗಿ ಮಂತ್ರಿಗಳು ಮತ್ತು ಎಲ್ಲ ಪಕ್ಷಗಳ ಮುಖಂಡರಿಗೂ ಮಹಾಲಿಂಗಪುರ ಪಟ್ಟಣ ಮತ್ತು ತಾಲೂಕಿಗಾಗಿ ಇರುವ ಹಳ್ಳಿಗಳ ಭೌಗೋಳಿಕ ಮಾಹಿತಿ ಪೂರಕ ಜನಸಂಖ್ಯೆಯ ಬಗ್ಗೆಯೂ ಅರಿಕೆ ಮೂಡಿಸಲಾಗಿ, ಅಷ್ಟೆ ಅಲ್ಲ ಜಿಲ್ಲಾಧಿಕಾರಿಗಳಿಂದ ನೂತನ ತಾಲೂಕು ರಚನೆ ಕುರಿತು ಬಗ್ಗೆ ಕಂದಾಯ ಇಲಾಖೆಗೆ ಮಾಹಿತಿಯೂ ರವಾನೆಯಾಗಿರುವುದನ್ನೂ ಸಹ ನಾವಿಲ್ಲಿ ಸ್ಮರಿಸಬಹುದು.
ಮಹಾಲಿಂಗಪುರ ಪಟ್ಟಣ ತಾಲೂಕಿಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧಕ್ಕೆ ತೆರಳಲು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಂದ ಸುಮಾರು ೫೦೦ ಜನ ತೆರಳಿದ್ದರು.
ಬೆಳಗಾವಿಯಲ್ಲಿ ಮಹಾಲಿಂಗಪುರ ನೂತನ ತಾಲೂಕು ಮನವಿ ಸ್ವೀಕರಿಸಿದ ಸಚಿವ ಭೈರತಿ ಸುರೇಶ್


