ಬೆಳಗಾವಿ : ಭಾರತೀಯ ಬಂಜಾರ ಸಂಘಟನಾ ಸಮೀತಿ ರಾಜ್ಯಾಧ್ಯಕ್ಷ ಪುಂಡಲೀಕ ಪವಾರ ನೇತೃತ್ವ ಸಂಘಟನೆ ಚಳಿಗಾಲ ಅಧೀವೇಶನದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದ ರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಸಮಾಜ ಕಲ್ಯಾಣ ಸಚಿವ ಎಚ್ ಮಹಾದೇವಪ್ಪ ಸೇರಿದಂತೆ ವಿವಿಧ ಸಚಿವ ಶಾಸಕರಿಗೆ,ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವಾಯ್ ವಿಜೆಯಂದ್ರ ಮನವಿ ಸಲ್ಲಿಸಿ ಮಾತನಾಡಿದವರು, ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನ ಮಾನದಂಡ ಉಲ್ಲಂಘಿಸಿ ಅವೈಜ್ಞಾನಿಕ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡಿರುವ ಆದೇಶ ಪುನರ್ ಪರಿಶೀಲನೆಗೊಳಪಡಿಸಬೇಕೆಂದು ಮನವರಿಕೆ ಮಾಡಿಕೊಂಡರು.
ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಿಸುವ ಸಮಯ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತಿರುವ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನ ಮಾನದಂಡ ಅನೇಕ ಆಯೋಗ ಶಿಫಾರಸ್ಸು ಧಿಕ್ಕರಿಸಿ, ರಾಜಕೀಯ ರಾಜೀ ಪಂಚಾಯಿತಿ ನಡೆಸಿ, ಮೀಸಲಾತಿ ವರ್ಗೀಕರಿಸಿರುವುದು ಪರಿಶಿಷ್ಟ ಜಾತಿಯ ಭೋವಿ, ಲಂಬಾಣಿ, ಕೊರಮ, ಕೊರಚ, ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಘನಘೋರ ಅನ್ಯಾಯವಾಗಿದೆ.
ಈ ವಿಷಯವಾಗಿ ಹಲವು ಆಯೋಗ ವರದಿಯಲ್ಲಿ ನಮೂದಿಸಿರುವಂತೆ ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಅತಿ ಹಿಂದುಳಿದಿರುವ ಜಾತಿಗಳಿಗೆ ಒಳ ಮೀಸಲಾತಿ ಪ್ರಾಧಾನ್ಯತೆ ನೀಡಬೇಕಾದ ಘನ ಸರ್ಕಾರ, ಇಂತಹ ಜಾತಿಗಳ ಮೇಲೆ ಗದಪ್ರಹಾರ ನಡೆಸಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ತಿಲಾಂಜಲಿ ನೀಡಿದಂತಾಗಿದೆ ಎಂದರು. ಅಧಿವೇಶನದ ಶಾಸನ ಸಭೆ ಸಮಯ ಈ ವಿಷಯಕ್ಕೆ ಸಂಬಂಧಿಸಿದಂತೆ ಗಂಬಿರವಾಗಿ ಚರ್ಚಿಸಿ, ಒಳ ಮೀಸಲಾತಿ ವಿಚಾರ ಸುಪ್ರೀಂಕೋರ್ಟ್ ಆದೇಶ ನೀಡಿರುವ ಮಾನದಂಡ ಪಾಲನೆಯಾಗಬೇಕು ಪ್ರಾಯೋಗಿಕ ದತ್ತಾಂಶಗಳ ಎಂಪೆರಿಕಲ್ ಡಾಟಾ ಸಂಗ್ರಹಣೆ ಮಾಡಿ, ಈ ದತ್ತಾಂಶ ಆಧಾರ ಮೇಲೆ ಮೀಸಲಾತಿ ವರ್ಗೀಕರಣ ಆಗಬೇಕೆಂದರು.
ಒಳ ಮೀಸಲಾತಿ ಆದೇಶ ಜಾರಿಗೊಂಡಿರುವ ಆಧಾರದ ಸರ್ಕಾರಿ ನೇಮಕಾತಿ ಪ್ರಕ್ರಿಯೆ ‘ರೋಸ್ಟರ್ ಬಿಂದು’ ಪದ್ದತಿ’ ಸಿ’ ಗುಂಪಿಗೆ ಬರುವ ಸಮುದಾಯಕ್ಕೆ ಅನ್ಯಾಯವಾಗುತ್ತುದೆ. ಪರಿಶಿಷ್ಟ ಜಾತಿಯ ಎಲ್ಲಾ ಜಾತಿಗೆ ಸಮಾನ ಹುದ್ದೆ ಹಂಚಿಕೆ ಯಾಗುವಂತೆ ರೋಸ್ಟರ್ ಬಿಂದು ಮಾರ್ಪಡಿಸಿ ‘ಏಕಗವಾಕ್ಷಿ’ (ಸಿಂಗಲ್ ವಿಂಡೋ) ಪದ್ಧತಿ ಜಾರಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮೂಲಕ ಆಗ್ರಹಿಸಿದವರು, ಅನೇಕ ಆಯೋಗ ವರದಿಯಲ್ಲಿ ನಮೂದಿಸಿರುವಂತೆ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.೧ ರಷ್ಟು ಮೀಸಲಾತಿ ಹೆಚ್ಚಿಸಿ, ‘ಸಿ’ ಗುಂಪಿನಿಂದ ಪ್ರತ್ಯೇಕಿಸಬೇಕು.
ಸ್ಪೃಶ್ಯ- ಅಸ್ಪೃಶ್ಯ ಎಂಬ ಅಸಂವಿಧಾನಿಕ ಪದ ನ್ಯಾ. ನಾಗಮೋಹನದಾಸ್ ವರದಿ ಹಾಗೂ ಶಾಸನಸಭೆಯಿಂದ ಬಳಕೆ ಆಗಿರುವುದರಿಂದ ಈ ಪದ ಸರ್ಕಾರಿ ಕಡಿತದಿಂದ ತೆಗೆದು ಹಾಕಬೇಕು ಹಾಗೂ ಭೋವಿ, ಲಂಬಾಣಿ, ಕೊರಚ, ಕೊರಮ ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ದಮನಿತ, ಶೋಷಿತ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು.
ಪ್ರಸ್ತುತ ಖಾಸಗಿ ವಲಯ ಉದ್ಯೋಗ ಸೃಷ್ಟಿಯಾಗುತ್ತಿರುವ ಖಾಸಗಿ ವಲಯಯದಲ್ಲಿ ಮೀಸಲಾತಿ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಒಂದು ವೇಳೆ ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಾಂಡಾಗಳಿಗೆ ಬರುವುದು ಅನಿವಾರ್ಯವಾಗುತ್ತದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿಗೆ ತಕ್ಕ ಪಾಠ ಕಲಿಸಬೇಕಾದ ಸಂದರ್ಭ ಉದ್ಭವಾಗಿತ್ತು ಎಂದು ಎಚ್ಚರಿಕೆ ನೀಡಿದರು. ಈ ಸಮಯದಲ್ಲಿ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.


