ನೇಕಾರರಿಗೆ ಉಚಿತ ವಿದ್ಯುತ್‌- 2023ರಿಂದಲೇ ಅನ್ವಯಗೊಳಿಸುವ ಬೇಡಿಕೆ ಪರಿಶೀಲನೆ ಭರವಸೆ

Hasiru Kranti
ನೇಕಾರರಿಗೆ ಉಚಿತ ವಿದ್ಯುತ್‌- 2023ರಿಂದಲೇ ಅನ್ವಯಗೊಳಿಸುವ ಬೇಡಿಕೆ ಪರಿಶೀಲನೆ ಭರವಸೆ
WhatsApp Group Join Now
Telegram Group Join Now

2023ರಿಂದಲೇ ನೇಕಾರರಿಗೆ ಉಚಿತ ವಿದ್ಯುತ್‌ ಬೇಡಿಕೆ ಪರಿಶೀಲನೆ ಭರವಸೆ

ಬೆಳಗಾವಿ: ವಿದ್ಯುತ್‌ ಮಗ್ಗಗಳಿಗೆ ಹತ್ತು ಅಶ್ವಶಕ್ತಿವರೆಗೆ ನವೆಂಬರ್‌ 2023ರಿಂದ ಜಾರಿ ಮಾಡಿರುವ ಉಚಿತ ವಿದ್ಯುತ್‌ ಪೂರೈಕೆ ಯೋಜನೆಯನ್ನು ಏಪ್ರಿಲ್‌ನಿಂದ ಅನ್ವಯಗೊಳಿಸುವ ನೇಕಾರರ ಬೇಡಿಕೆಯನ್ನು ಪರಿಗಣಿಸಲಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಶಶಿಕಲಾ ಜೊಲ್ಲೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹತ್ತು ಅಶ್ವಶಕ್ತಿವರೆಗಿನ ವಿದ್ಯುತ್‌ ಮಗ್ಗಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಈ ಆದೇಶ ನವಂಬರ್‌ನಿಂದ ಜಾರಿಗೆ ಬಂದಿದ್ದು, ಅಂದಿನಿಂದ ಅನ್ವಯವಾಗುತ್ತಿದೆ.

ಉಚಿತ ವಿದ್ಯುತ್‌ ಪೂರೈಕೆ ಯೋಜನೆಯಿಂದ ವಾರ್ಷೀಕ 120 ರಿಂದ 130 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ವಿವರಿಸಿದರು.

ಸರ್ಕಾರದ ಆದೇಶ ಹೊರಬಿದ್ದ ದಿನದಿಂದ ಉಚಿತ ವಿದ್ಯುತ್‌ ಪೂರೈಕೆ ಅನ್ವಯವಾಗುತ್ತಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಅನ್ವಯ ಮಾಡಬೇಕು ಎಂಬ ಬೇಡಿಕೆಗೆ ಆರ್ಥಿಕ ಇಲಾಖೆ ಅನುಮತಿ ಅಗತ್ಯವಿದೆ. ಹೀಗಾಗಿ ಬೇಡಿಕೆ ಪರಿಗಣಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಹತ್ತು ಅಶ್ವಶಕ್ತಿವರೆಗಿನ ವಿದ್ಯುತ್‌ ಮಗ್ಗಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಮಾಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು.ನಂತರ ಬೇಡಿಕೆ ಹಿನ್ನೆಲೆಯಲ್ಲಿ ಹತ್ತರಿಂದ ಇಪ್ಪತ್ತು ಅಶ್ವಶಕ್ತಿವರೆಗೆ ಪ್ರತಿ ಯೂನಿಟ್‌ಗೆ ರಿಯಾಯಿತಿ ದರ 1.25 ರೂ. ಘೋಷಣೆ ಮಾಡಲಾಯಿತು ಎಂದರು.

ಬಿ.ವೈ. ವಿಜಯೇಂದ್ರ, ಸಿದ್ದು ಸವದಿ, ಶಶಿಕಲಾ ಜೊಲ್ಲೆ ಅವರು ನೇಕಾರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಡಪಸಿದಾಗ, ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ನೆರವು ನೀಡಿರಲಿಲ್ಲ. ಬೇಡಿಕೆ ಬಗ್ಗೆ ಸಿಎಂ ಅವರಿಗೆ ಮನವಿ ಮಾಡಲಾಗುವುದು ಎಂದು ಎಂದು ಹೇಳಿದ ಮೇಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ಸದನದಲ್ಲಿದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಶಿವಾನಂದ ಪಾಟೀಲ ಅವರು, ನೇಕಾರರ ಬೇಡಿಕೆ ಬಗ್ಗೆ ವಿವರಣೆ ನೀಡಿದರು.

ಅನೇಕ ನೇಕಾರರು ಉಚಿತ ವಿದ್ಯುತ್‌ ಯೋಜನೆ ಜಾರಿಗೆ ಬರುವವರೆಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಿದ್ದಾರೆ. ಕೆಲವರು ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ. ಯಾವುದೇ ಯೋಜನೆ ಸರ್ಕಾರದ ಆದೇಶ ಹೊರಬಿದ್ದ ನಂತರವೇ ಅನ್ವಯವಾಗಲಿದೆ. ಆದರೂ ಆದೇಶ ಹೊರ ಬೀಳುವ ಮುಂಚಿನ ಅವಧಿಗೂ ಅನ್ವಯ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮವಾಗಿ ಸ್ಪಂದಿಸುತ್ತಿದೆ. ನೀವೂ ಬನ್ನಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡೋಣ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

WhatsApp Group Join Now
Telegram Group Join Now
Share This Article