ಬೆಳಗಾವಿ ಮೃಗಾಲಯಕ್ಕೆ ಬರಲಿವೆ ಮೊಸಳೆ, ಹಾವು: ಈಶ್ವರ ಖಂಡ್ರೆ

Hasiru Kranti
ಬೆಳಗಾವಿ ಮೃಗಾಲಯಕ್ಕೆ ಬರಲಿವೆ ಮೊಸಳೆ, ಹಾವು: ಈಶ್ವರ ಖಂಡ್ರೆ
WhatsApp Group Join Now
Telegram Group Join Now

ಕಿರು ಮೃಗಾಲಯ ಆಕರ್ಷಕಗೊಳಿಸಲು ಕ್ರಮ- ಈಶ್ವರ ಖಂಡ್ರೆ

ಬೆಳಗಾವಿ, ಡಿ.12: ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಶೀಘ್ರವೇ ಸರೀಸೃಪ (ಹಾವು) ಹಾಗೂ ಮೊಸಳೆಗಳ ಆವರಣಕ್ಕೆ ಚಾಲನೆ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡಿ ಮೊಸಳೆ ಮತ್ತು ಸರೀಸೃಪಗಳ ಆವರಣದ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು, 50 ಲಕ್ಷ ರೂ. ವೆಚ್ಚದಲ್ಲಿ ಮೊಸಳೆ ಆವರಣ ಮತ್ತು 40.8ಲಕ್ಷ ವೆಚ್ಚದಲ್ಲಿ ಸರೀಸೃಪಗಳ ಆವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರವೇ 2 ಮೊಸಳೆ ಹಾಗೂ ಹೆಬ್ಬಾವು, ಕಾಳಿಂಗ ಸರ್ಪ, ಮಂಡಲ ಸೇರಿದಂತೆ 12 ಹಾವುಗಳನ್ನು ಈ ಆವರಣದಲ್ಲಿ ಬಿಡಲಾಗುವುದು ಎಂದು ವಿವರಿಸಿದರು.

ಇದರ ಜೊತೆಗೆ ಮೃಗಾಲಯಕ್ಕೆ ಬರುವ ಸಂದರ್ಶಕರಿಗೆ ವನ್ಯಜೀವಿಗಳ ಬಗ್ಗೆ ಮತ್ತು ಮೃಗಾಲಯದ ಬಗ್ಗೆ ಮಾಹಿತಿ ನೀಡುವ ಸಾಕ್ಷ್ಯಚಿತ್ರಪ್ರದರ್ಶನ ಮಾಡಲು ಆಪ್ತ ಚಿತ್ರಮಂದಿರ ನಿರ್ಮಿಸಲಾಗಿದ್ದು ಶೀಘ್ರವೇ ಇದನ್ನು ಲೋಕಾರ್ಪಣೆ ಮಾಡಲಾಗುವುದು ಎಂದೂ ತಿಳಿಸಿದರು.

ಮೃಗಾಲಯದ ಆವರಣದಲ್ಲಿ ಸಂದರ್ಶಕರ ವಾಹನ ನಿಲುಗಡೆಗೆ ವಿಶಾಲ ಸ್ಥಳ, ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಒಟ್ಟು 5.85 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಜನವರಿ ಮೊದಲ ವಾರದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಪಕ್ಷಿಗಳ ವಿಭಾಗದಲ್ಲಿ ಪಾರದರ್ಶಕ ಗಾಜು ಅಳವಡಿಸಲಾಗಿದ್ದು, ಪಕ್ಷಿಗಳ ವೀಕ್ಷಣೆಗೆ ಮತ್ತು ಫೋಟೋ ತೆಗೆಯಲು ಅನುಕೂಲ ಕಲ್ಪಿಸಲಾಗಿದೆ. ಇದೆಲ್ಲವೂ ಮೃಗಾಲಯಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article