ಬೆಳಗಾವಿ: (ಡಿ.11) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದರೂ ಸಹ ಕಾಂಗ್ರೆಸ್ ಮನೆಯಲ್ಲಿ ಕುರ್ಚಿ ಕ್ರಾಂತಿಯ ಕಿಚ್ಚು ಮಾತ್ರ ಆರಿಲ್ಲ. ಎಲ್ಲವೂ ಕೂಲ್ ಆಯ್ತು ಎನ್ನುವಾಗಲೇ ಮತ್ತೆ ಸಿಎಂ ಪುತ್ರ ಯತೀಂದ್ರ ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿ ಕುರ್ಚಿ ಕಿಡಿಗೆ ತುಪ್ಪ ಸುರಿದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಮತ್ತೆ ಮಹತ್ವದ ರಾಜಕೀಯ ವಿದ್ಯಮಾನಗಳು ನಡೆದಿವೆ.
ಕಾಣದ ಕಡಲಿಗೆ ಹಂಬಲಿಸುತ್ತಿದೆ ಮನ ಎಂಬ ಸಿ ಅಶ್ವಥ್ ಹಾಡನ್ನು ನಾಯಕತ್ವ ಬದಲಾವಣೆ ಕುರಿತಾಗಿ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಜಟಾಪಟಿಗೆ ಬಳಕೆ ಮಾಡಿದ ಸುನೀಲ್ ಕುಮಾರ್, ಕಾಣದ ಕುರ್ಚಿಗೆ ಹಂಬಲಿಸುತ್ತಿದೆ ಮನ. ಕೂರಬಲ್ಲನೇ ಒಂದು ದಿನ ಎಂಬ ಸ್ಥಿತಿ ಡಿಕೆ ಶಿವಕುಮಾರ್ ಅವರದ್ದಾಗಿದೆ ಎಂದು ಕಾಲೆಳೆದರು. ಮೇಕೆದಾಟು ವಿಚಾರವಾಗಿ ಜೊತೆಯಾಗಿ ಕೇಂದ್ರಕ್ಕೆ ಮನವಿ ಮಾಡೋಣ ಎಂದು ಡಿಕೆ ಶಿವಕುಮಾರ್ ಕೈ ಮುಗಿದು ಕೇಳಿದ ಸಂದರ್ಭದಲ್ಲಿ ಈ ನಯ ವಿನಯ ದಿಢೀರ್ ಏಕೆ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.
ಉತ್ತರ ಕರ್ನಾಟಕದ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು. “1950 ರಿಂದ ದಕ್ಷಿಣ ಕರ್ನಾಟಕದವರು 15 ಜನ ಮುಖ್ಯಮಂತ್ರಿ ಗಳಾಗಿದ್ದಾರೆ. ಉತ್ತರ ಕರ್ನಾಟಕ ದವರು 8 ಬಾರಿ ಆಗಿದ್ದಾರೆ. ಯಾವ ಮುಖ್ಯಮಂತ್ರಿಯೂ ಐದು ವರ್ಷಗಳನ್ನು ಪೂರೈಸಿಲ್ಲ. ಆರು ತಿಂಗಳು, ಒಂದು ವರ್ಷ ಅಂತಾ ಏನಾದರೂ ಭ್ರಷ್ಟಾಚಾರ ಆರೋಪ ಬಂದ ಇಳಿಸಲಾಗಿದೆ. ಬಹುಶಃ ಸಿದ್ದರಾಮಯ್ಯನೇ ಇತಿಹಾಸ ರಚನೆ ಮಾಡ್ತಿದ್ದಾರೆ.
ಅದಕ್ಕಾಗಿಯೇ ನಮ್ಮ ಸಿದ್ದರಾಮಯ್ಯ ಆ ದಿನಗಳನ್ನು ಕಾಯ್ತಾ ಇದ್ದಾರೆ. ಸಿದ್ದರಾಮಯ್ಯನವರು ದೇವರಾಜ್ ಅರಸ್ ದಾಖಲೆ ಮುರಿದು, ಇನ್ನೂ ಮುಂದುವರಿದು ಆಮೇಲೆ ಯೋಚನೆ ಮಾಡ್ತೀನಿ ಅಂದಿದ್ದಾರೆ ಹೊರತು ಕುರ್ಚಿ ಬಿಡುತ್ತೇನೆ ಅಂತಾ ಹೇಳಿಲ್ಲ” ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಯಾವಾಗ ತುಂಬುತ್ತೀರಿ? ಎಂದು ಮೇಲ್ಮನೆ ಸದಸ್ಯ ನಿರಾಣಿ ಹಣಮಂತ ರುದ್ರಪ್ಪ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಎದ್ದು ನಿಂತು ಉತ್ತರಿಸುತ್ತಿದ್ದಂತೆ, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿವಲ್ಲ ಎಂದು ಪರಿಷತ್ ಕಾರ್ಯದರ್ಶಿಗೆ ಪ್ರಶ್ನಿಸಿದರು.
ಸಿಬ್ಬಂದಿಯಿಂದ ಕುರ್ಚಿಯನ್ನ ಸರಿಪಡಿಸಿಕೊಂಡು ಮಾತನಾಡಲು ಆರಂಭಿಸುತ್ತಿದ್ದಂತೆ, ಸದಸ್ಯ ಭೋಜೇಗೌಡ ಅವರು ಮುಖ್ಯಮಂತ್ರಿ ಅವರ ಚೇರ್ ಈ ತರ ಮಾಡಿದ್ದೀರಲ್ಲ ಎಂದು ಕಾಲೆಳೆದರು. ತೊಂದರೆಯಾದಾಗ ತೊಂದರೆಯಾಯಿತು ಎಂದು ಹೇಳಬೇಕು. ಈಗ ಕುರ್ಚಿ ಸರಿಹೋಯಿತು ಎಂದು ನಗುತ್ತಲೇ ಸಿಎಂ ಟಾಂಗ್ ನೀಡಿದರು.
ವಿಪಕ್ಷ ಸದಸ್ಯ ಯಾಕೋ ನಿಮ್ಮ ಚೇರ್ ಅತಂತ್ರವಾಗಿದೆ ಎಂದು ಮತ್ತೆ ಕಾಲೆಳೆದರು. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಇದಕ್ಕೆ ಧ್ವನಿಗೂಡಿಸಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ನನ್ನ ಚೇರ್ ಅತಂತ್ರದಲ್ಲಿಲ್ಲ. ನಿಮ್ಮ ಚೇರ್ ಗಟ್ಟಿಯಾಗಿದೆಯಾ ನೋಡಿಕೊಳ್ಳಿ. ನನ್ನ ಚೇರ್ ಗಟ್ಟಿಯಾಗಿದೆ ನಯವಾಗಿ ತಿರುಗೇಟು ನೀಡಿದರು.
ಯತೀಂದ್ರ ಹೇಳಿಕೆ ಸುತ್ತ:
ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಿದರೆ, ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿ, ನಂತರ ಪುತ್ರನೊಂದಿಗೆ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.
ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ, ನನ್ನ ತಂದೆಯೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಡಾ ಯತೀಂದ್ರ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ ಪುನರುಚ್ಛರಿಸಿದ್ದರು. ಯತೀಂದ್ರ ಅವರ ಹೇಳಿಕೆಗೆ ಸುದ್ದಿಗಾರರು ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯೆ ಕೇಳಿದಾಗ ಡಿಸಿಎಂ ಡಿ ಕೆ ಶಿವಕುಮಾರ್ ಇದಕ್ಕೆ ಸಿಎಂ ಅವರೇ ಉತ್ತರ ನೀಡುತ್ತಾರೆ ಎಂದರು.


