ಉತ್ತರ ಕರ್ನಾಟಕಕ್ಕೆ ಪ್ರಥಮ ಆದ್ಯತೆ ನೀಡಲು ಸಭಾಪತಿಯವರಿಗೂ ಪತ್ರ
ಬೆಳಗಾವಿ: ರಾಜ್ಯದ ಸಮಸ್ಯೆಗಳನ್ನು ಪರಿಹರಿಸಿ; ಇಲ್ಲವೇ ರಾಜೀನಾಮೆ ಕೊಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಅಧಿವೇಶನದ ಸಂಬಂಧ ಪ್ರಶ್ನೆಗೆ ಉತ್ತರಿಸಿದರು. ರೈತರು, ಶಿಕ್ಷಕರು, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರಿಗೆ ಅತಿವೃಷ್ಟಿ- ಅನಾವೃಷ್ಟಿಗೆ ಸ್ಪಂದಿಸದೇ ಇರುವ ಸರಕಾರದ ನೀತಿಗಳು, ಮೆಕ್ಕೆಜೋಳ ಖರೀದಿ ವಿಚಾರ, ಕಬ್ಬು ಬೆಳೆಗಾರರ ಸಮಸ್ಯೆಗಳು- ಹೀಗೆ ಅನೇಕ ಸಮಸ್ಯೆಗಳಿಗೆ ಈ ಸರಕಾರ ಕಾರಣವಾಗಿದೆ. ಇವೆಲ್ಲವನ್ನು ತೆಗೆದುಕೊಂಡು ನಮ್ಮ ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಇಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದ ಸಮಸ್ಯೆಗಳು ಸೇರಿ ಉತ್ತರ ಭಾಗದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಥಮ ಆದ್ಯತೆ ಇರಬೇಕೆಂದು ಸಭಾಪತಿಯವರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಎಲ್ಲ ಬೆಂಗಳೂರಿನ ಸಮಸ್ಯೆ, ಆ ಭಾಗದ ಸಮಸ್ಯೆಗಳನ್ನು ಇಲ್ಲಿಗೆ ಹೊತ್ತು ತಂದಿದ್ದಾರೆ ಎಂದು ಆಕ್ಷೇಪಿಸಿದರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿ, ಸರಕಾರದ ನೀತಿ ಕುಣಿಯಲಾರದವರಿಗೆ ನೆಲ ಡೊಂಕು ಎಂಬಂತಿದೆ ಎಂದು ಅವರು ಟೀಕಿಸಿದರು. ಇದು ಕುಣಿಯಲಾರದ, ಲೂಟಿಕೋರ ಸರಕಾರ. ಈ ಲೂಟಿಕೋರ ಸರಕಾರಕ್ಕೆ ತಕ್ಕ ಪಾಠ ಕಲಿಸಲು ನಾವು ಸಜ್ಜಾಗಿದ್ದೇವೆ ಎಂದು ಅವರು ನುಡಿದರು.
ನಾ ಕೊಡೆ, ನೀ ಬಿಡೆ ನೀತಿ ರಾಜ್ಯದ ಜನರಿಗೆ ಇದು ಬೇಕಿಲ್ಲ. ನಿಮ್ಮ ಅಧಿಕಾರ ಹಂಚಿಕೆ ನಿಮ್ಮ ಪಾಡು. ನಮಗದು ಬೇಡ. ಸಮಸ್ಯೆ ಇದೆ. ಪರಿಹಾರ ಕೊಡಿ. ಇಲ್ಲವೇ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಕಳೆದ ಸದನದಲ್ಲೂ ಇಲ್ಲಿ ಉತ್ತರ ಕರ್ನಾಟಕದ ವಿಚಾರ ಪ್ರಸ್ತಾಪಿಸಿದ್ದೆವು. ಉತ್ತರ ಕರ್ನಾಟಕದ ವಿಚಾರ ಚರ್ಚೆ ನಡೆಯಲಿಲ್ಲ; ದಿಢೀರ್ ಸದನ ಮುಂದೂಡಿದ್ದರು ಎಂದು ಆಕ್ಷೇಪಿಸಿದರು. ಪ್ರಥಮದಿಂದಲೇ ಉತ್ತರ ಕರ್ನಾಟಕದ ವಿಚಾರ ಚರ್ಚಿಸಿ ಎಂದು ಆಗ್ರಹಿಸಿದರು.
ಇದು ತಾರತಮ್ಯ ನೀತಿಯ ಸರಕಾರ..
ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ; ವಿಪಕ್ಷದ ಶಾಸಕರಿಗೆ ಕಡಿಮೆ ಅನುದಾನ ಕೊಡುವ ಇದು ತಾರತಮ್ಯದ ಸರಕಾರ ಎಂದು ಟೀಕಿಸಿದರು. ಇದು ಕಾಲಹರಣದ ಅಧಿವೇಶನ ಆಗಬಾರದು ಎಂಬುದು ನಮ್ಮ ವಾದ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಹೇಳಿದರು.


