ಮೌಲ್ಯಗಳ ಕೊಡುಗೆಯೇ ಮಹಾಪರಿನಿಬ್ಬಾಣ: ಪ್ರೊ.ಚಲುವರಾಜು

Hasiru Kranti
ಮೌಲ್ಯಗಳ ಕೊಡುಗೆಯೇ ಮಹಾಪರಿನಿಬ್ಬಾಣ: ಪ್ರೊ.ಚಲುವರಾಜು
WhatsApp Group Join Now
Telegram Group Join Now

ಬಳ್ಳಾರಿ,ಡಿ.08- ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತçಗಳ ಮೂಲಕ ಮಹಾಪರಿನಿಬ್ಬಾಣದ ತರುವಾಯ ತಮ್ಮ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆ ನೀಡಿ ಬಾಬಾ ಸಾಹೇಬರು ತಮ್ಮ ಸಾರ್ಥಕ ಬದುಕನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಚಲುವರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ ಸಿದ್ದು ಪಿ ಆಲಗೂರ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಡಾ.ಬಿ.ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿನಿಬ್ಬಾಣ ದಿನಾಚರಣೆ’ಯ ಭಾಷಣಕಾರರಾಗಿ ಮಾತನಾಡಿದರು.
ಬಾಬಾ ಸಾಹೇಬರ ಜ್ಞಾನ ಮತ್ತು ಸಾಮಾಜಿಕ ಸೇವೆಯ ತುಡಿತಗಳನ್ನು ಪಾರಂಪರಿಕ ಶಿಕ್ಷಣ ವ್ಯವಸ್ಥೆಯ ಹೊರತಾಗಿ ಸಮಾಜಮುಖಿ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಲು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಅಧ್ಯಯನ ಪೀಠಗಳು ಮುಂದಾಗಬೇಕಿದೆ ಎಂದರು.
ಶೋಷಿತ ಸಮುದಾಯಕ್ಕೆ ಶಿಕ್ಷಣ ಒದಗಿಸುವ ಅವರ ಕನಸು ಇನ್ನೂ ಪೂರ್ಣಗೊಂಡಿಲ್ಲ ಎಂಬ ಕೊರಗಿನಿಂದಲೇ ಬಾಬಾ ಸಾಹೇಬರು ತಮ್ಮ ಕೊನೆಯುಸಿರಿಳೆದರು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆಯಂತಹ ಶಿಕ್ಷಣದ ಹರಿಕಾರರನ್ನು ಅಂಬೇಡ್ಕರ್ ಅವರು ಆದರ್ಶವನ್ನಾಗಿಸಿಕೊಂಡು ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಶಿಕ್ಷಣವನ್ನು ಪೂರೈಸಿದರು ಎಂದು ತಿಳಿಸಿದರು.
ಹಕ್ಕುಗಳ ವಂಚಿತ ತಳಸಮುದಾಯಗಳು ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಸಮುದಾಯವನ್ನು ಬಲಪಡಿಸಬೇಕು ಎಂಬುದು ಇವರ ಉದ್ದೇಶವಾಗಿತ್ತು. ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನು ವೈಚಾರಿಕತೆಗೆ ಒಳಪಡಿಸಿ ಆಳವಾದ ಸಂಶೋಧನೆಯ ಮೂಲಕ ಪ್ರಸ್ತುತ ಸಮಾಜಕ್ಕೆ ಮಾದರಿಯಾಗುವ ಅಂಶಗಳನ್ನು ಕಂಡುಕೊಳ್ಳುವ ಕೆಲಸ ಅಧ್ಯಯನ ಪೀಠಗಳ ಮೂಲಕ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾಗಿ ವೇದಿಕೆಯಲ್ಲಿದ್ದ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ. ಜಯಲಕ್ಷಿö್ಮ ನಾಯಕ ಅವರು ಮಾತನಾಡಿ, ಶೋಷಿತರ ಧ್ವನಿಯಾಗಿದ್ದ ಬಾಬಾಸಾಹೇಬರ ಇಂದಿನ ಪರಿನಿಬ್ಬಾಣ ದಿನವು ಅವರ ತತ್ವಾದರ್ಶಗಳನ್ನು ಪಾಲಿಸುವ ನಮೆಗೆಲ್ಲ ಕರಾಳ ದಿನವಾಗಿದೆ. ಅಂಬೇಡ್ಕರ್ ಅವರ ಹೋರಾಟದ ಬದುಕನ್ನು ಅರ್ಥೈಸಿಕೊಂಡು ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಅಧ್ಯಕ್ಷತೆಯಲ್ಲಿ ಮಾತನಾಡಿ, ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶಕ್ಕೆ ಕೊಡುಗೆ ನೀಡಲು ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಮಹಾನ್ ಚೇತನವೆ ಬಾಬಾ ಸಾಹೇಬರು. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ದೇವರ ವಿಗ್ರಹಕ್ಕೆ ಬೀಳುವ ಉಳಿಪೆಟ್ಟುಗಳಂತೆ ಅಂಬೇಡ್ಕರ್ ಅವರು ಹೆಜ್ಜೆ-ಹೆಜ್ಜೆಗೂ ಸಂಕಷ್ಟಗಳನ್ನು ಎದುರಿಸಿದರು. ಕೊನೆಗೆ ಎಲ್ಲರಿಗೂ ದಾರಿದೀಪವಾಗುವ ದೇವರಂತೆ ಅಜರಾಮರವಾದರು ಎಂದು ಹೇಳಿದರು.
ಅಂಬೇಡ್ಕರ್ ಅವರು ಸ್ವೀಕರಿಸಿದ್ದ ಬೌದ್ಧ ಧರ್ಮದ ಬುದ್ಧಗೀತೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಇದಕ್ಕೂ ಮೊದಲು ವಿವಿ ಆವರಣದಲ್ಲಿರುವ ಬಾಬಾಸಾಹೇಬರ ಕಂಚಿನ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ, ಡಾ ಬಿ ಆರ್ ಅಂಬೇಡ್ಕರ್ ತರಬೇತಿ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಡಾ. ಗೌರಿ ಮಾಣಿಕ ಮಾನಸ ವೇದಿಕೆಯಲ್ಲಿದ್ದರು.
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ ಶಶಿಧರ ಕೆಲ್ಲೂರ್ ನಿರೂಪಿಸಿ, ವಂದಿಸಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.
WhatsApp Group Join Now
Telegram Group Join Now
Share This Article