ಚನ್ನಮ್ಮನ ಕಿತ್ತೂರು: ಕಳೆದ ವರ್ಷ ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ವೇಳೆ ಪೊಲೀಸರ ಅನಗತ್ಯ ದೌರ್ಜನ್ಯದಿಂದ ಅನೇಕ ಹೋರಾಟಗಾರರು ಹಲ್ಲೆಗೆ ಒಳಗಾಗಿದ್ದ ಹಿನ್ನೆಲೆ, ಈ ವರ್ಷ ಡಿಸೆಂಬರ್ 10 ಅನ್ನು “ಲಿಂಗಾಯತರ ಮೇಲಿನ ದೌರ್ಜನ್ಯ ದಿನ”ವಾಗಿ ಆಚರಿಸಲಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.
ಪಟ್ಟಣದ ಡೊಂಬರಕೊಪ್ಪ ಐಬಿಯಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಇದೇ ದಿನ ಬೆಳಗಾವಿ ಗಾಂಧಿ ಭವನದಿಂದ ಸುವರ್ಣ ಸೌಧದವರೆಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಮಾಜದ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹಲವು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು, ಅನೇಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪಂಚಮಸಾಲಿ 2ಎ ಮೀಸಲಾತಿಯನ್ನು ಅಸಂವಿಧಾನಿಕವೆಂದು ತಿರಸ್ಕರಿಸಿರುವುದು ನೋವು ತಂದಿದೆ ಎಂದು ಅವರು ಹೇಳಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದರೂ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ದಿಢೀರ್ ಲಾಠಿಚಾರ್ಜ್ ಸಮಾಜದ ಬಾಂಧವರಿಗೆ ತೊಂದರೆ ತಂದುಕೊಟ್ಟಿತು. ಆ ಘಟನೆಯ ವಿರುದ್ಧ ಖಂಡನೆ ವ್ಯಕ್ತಪಡಿಸಲು ಈ ಮೌನ ಪ್ರತಿಭಟನೆ ಏರ್ಪಡಿಸುತ್ತಿದ್ದೇವೆ. ಕಳೆದ ಅಧಿವೇಶನದಲ್ಲಿ ಮನವಿ ಪತ್ರ ಸಲ್ಲಿಸುವ ವೇಳೆ ನಡೆದ ಲಾಠಿಚಾರ್ಜ್ ಅನ್ನು ಸಮಾಜ ಮರೆತಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರಗಳು ಬದಲಾದರೂ ಹೋರಾಟದ ಧ್ವನಿ ಮಂಕಾಗಬಾರದು, ವಿಳಂಬವಾದರೂ ಹೋರಾಟ ಶಾಂತಿಯುತವಾಗಿ ಮುಂದುವರಿಯುತ್ತದೆ ಎಂಬ ಸಂದೇಶ ನೀಡಿ ಹೊರಟಿರುವುದಾಗಿ ಸ್ವಾಮೀಜಿ ಹೇಳಿದರು. ರಾಜಕೀಯಕ್ಕಾಗಿ ಸಮಾಜವನ್ನು ಸಂಘಟಿಸುವ ಕಾರ್ಯ ಮಾಡಿಲ್ಲ, ಸಮಾಜದ ಏಳಿಗೆಯಿಗಾಗಿ ಮತ್ತು ಶಿಕ್ಷಣ ಮೀಸಲಾತಿಗಾಗಿ ಸಂಘಟನೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೂಡಲಸಂಗಮದ ಮುಖ್ಯ ಪೀಠದ ಜೊತೆಗೆ ಕಿತ್ತೂರಿನಲ್ಲಿ ಮತ್ತೊಂದು ಪೀಠ ನಿರ್ಮಿಸಲಾಗುತ್ತಿದ್ದು, ಕೂಡಲಸಂಗಮದಲ್ಲಿ ದಾಸೋಹ ನಡೆಯುವಂತೆ ಕಿತ್ತೂರಿನಲ್ಲಿ ಶಿಕ್ಷಣಾಭಿವೃದ್ಧಿ ಮತ್ತು ಸೇವಾ ಚಟುವಟಿಕೆಗಳಿಗೆ ಎರಡನೇ ಪೀಠವನ್ನು ಸ್ಥಾಪಿಸುವ ಯೋಜನೆ ಇರುವುದಾಗಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಂಚಮಸಾಲಿ ಲಿಂಗಾಯತರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದನ್ನು ಅವರು ನೆನಪಿಸಿದರು.
ಈ ಪೂರ್ವಭಾವಿ ಸಭೆಗೆ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಯುವ ಘಟಕದ ಅಧ್ಯಕ್ಷ ಬಸವರಾಜ ಚಿನಗುಡಿ, ಸಮಾಜದ ಮುಖಂಡರಾದ ಚಂದ್ರಗೌಡ ಪಾಟೀಲ, ಕಿರಣ ವಾಳದ, ದೊಡಗೌಡ ಹುಚ್ಚನಗೌಡರ, ಶಿವನಗೌಡ ಪಾಟೀಲ, ನೇತ್ರಾವತಿ ಗಂಡಲಾಟಿ, ಗೋಕಾಕ ತಾಲೂಕಾ ಯುವ ಘಟಕದ ಅಧ್ಯಕ್ಷ ಪ್ರಭು ತಳಗಡೆ, ಮಲ್ಲಪ್ಪ ಕಮತೂರಿ, ಬಸವರಾಜ ಕುರಣಗಿ, ರೇವಣಕುಮಾರ ನೂಲನ್ನವರ ಸೇರಿದಂತೆ ಹಲವಾರು ಸಮಾಜಬಾಂಧವರು ಹಾಜರಿದ್ದರು.


