ನವದೆಹಲಿ,ಏಪ್ರಿಲ್ 08: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಇಲ್ಲಿನ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.
ಕವಿತಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು, ತನಿಖೆ ಪ್ರಗತಿಯಲ್ಲಿರುವ ಈ ಹಂತದಲ್ಲಿ ಮಧ್ಯಂತರ ಜಾಮೀನು ನೀಡುವುದು ಸರಿಯಲ್ಲ ಎಂದಿದ್ದಾರೆ.
‘ತಮ್ಮ 16 ವರ್ಷದ ಮಗನಿಗೆ ಪರೀಕ್ಷೆ ಇದ್ದು, ಆತನ ತಾಯಿಯಾಗಿ ಅವನಿಗೆ ನೈತಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವ ಅಗತ್ಯವಿದೆ’. ಹೀಗಾಗಿ ಮಧ್ಯಂತರ ಜಾಮೀನು ನೀಡಬೇಕೆಂದು ಕವಿತಾ ಕೋರ್ಟ್ ಮೆಟ್ಟಿಲೇರಿದ್ದರು.
ಕವಿತಾ ಅವರು ಕವಿತಾ ಅವರು ಈ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಲು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಜಾಮೀನು ಕೋರುತ್ತಿದ್ದಾರೆ ಎಂದು ಆರೋಪಿಸಿದ್ದ ಇ.ಡಿ, ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು.
ಕವಿತಾ ಅವರು ‘ಸೌತ್ ಗ್ರೂಪ್’ನ ಪ್ರಮುಖ ಸದಸ್ಯರಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಪರವಾನಗಿಗಳನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯಾಗಿ ಆಡಳಿತಾರೂಢ ಎಎಪಿಗೆ 100 ಕೋಟಿ ರೂ. ಕಿಕ್‌ಬ್ಯಾಕ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಸದ್ಯ ರದ್ದಾಗಿರುವ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ಬೆಂಬಲಿಗರ ಪ್ರತಿಭಟನೆಯ ನಡುವೆ 46 ವರ್ಷದ ಕವಿತಾ ಅವರನ್ನು ಮಾರ್ಚ್ 15ರಂದು ಅವರ ಬಂಜಾರಾ ಹಿಲ್ಸ್ ನಿವಾಸದಿಂದ ಇಡಿ ಅಧಿಕಾರಿಗಳು ಬಂಧಿಸಿದ್ದರು.
ಮರುದಿನ ಆಕೆಯನ್ನು ಏಳು ದಿನಗಳ ಇ.ಡಿ ಕಸ್ಟಡಿಗೆ ಒಪ್ಪಿಸಲಾಯಿತು. ನಂತರ ಆಕೆಯ ಕಸ್ಟಡಿಯನ್ನು ಮೂರು ದಿನಗಳ ಕಾಲ ವಿಸ್ತರಿಸಲಾಯಿತು. ಕಳೆದ ಮಂಗಳವಾರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.