ರಾಮದುರ್ಗ: ಹನುಮಮಾಲಾಧಾರಿಗಳಿಂದ ಪಟ್ಟಣದ ಐತಿಹಾಸಿಕ ಜಾನಕಿರಾಮೇಶ್ವರ ದೇವಸ್ಥಾನದಲ್ಲಿ ಸೀತಾ,ರಾಮ,ಲಕ್ಷ್ಮಣ ಹಾಗೂ ಹನುಮಾನ ವಿಗ್ರಹಗಳನ್ನು ಹೊತ್ತ ಪಲ್ಲಕ್ಕಿ ಪೂe ಜೊತೆಗೆ ಶ್ರೀಮಾನ ಹಾಗೂ ಹನುಮನ ಭಾವಚಿತ್ರದ ಬೃಹತ್ ಮೆರವಣೆಗೆ ಚಾಲನೆಯೊಂದಿಗೆ ಸಂಕೀರ್ತನಾ ಶೋಭಯಾತ್ರೆಯನ್ನು ನಡೆಸಲಾಯಿತು.
ಜಾನಕಿರಾಮೇಶ್ವರ ದೇವಸ್ಥಾನದಿಂದ ಹೊರಟ ವೃತಧಾರಿಗಳ ಹಾಗೂ ಸಾರ್ವಜನಿಕರ ಒಳಗೊಂಡ ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಹಿಡಿದು ಶ್ರೀರಾಮ ಜಯರಾಮ ಘೋಷಣೆ ಮೊಳಗಿಸುವ ಮೂಲಕ ಮೆರವಣಿಗೆಗೆ ಮೆರುಗು ತುಂಬಿದರು.
ಮಾರ್ಗಮಧ್ಯೆ ಬರುವ ದೇವಸ್ಥಾನ ಹಾಗೂ ಮಹಾಪುರುಷರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಭಾರತ ಮಾತೆಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಅಲ್ಲಲ್ಲಿ ರಸ್ತೆಯ ಮೇಲೆ ಓಂಕಾರ್ ಹಾಗೂ ಸ್ವಸ್ತಿಕ್ ಸೇರಿದಂತೆ ಮುಂತಾದ ಚಿಹ್ನೆಗಳ ಕರ್ಪೂರದ ದೀಪಗಳನ್ನು ಬೆಳಗಿ ಅದರ ಸುತ್ತ ನೃತ್ಯ ಮಾಡುತ್ತಾ ಹಾಡು ಹೇಳಿದ ವೃತಧಾರಿಗಳ ದೃಶ್ಯ ಅವರ ಭಕ್ತಿಪರವಶತೆಯನ್ನು ತೋರಿಸಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮೆರವಣಿಗೆಯು ಮತ್ತೆ ಸ್ವಸ್ಥಾನಕ್ಕೆ ಮರಳಿ ಸಂಪನ್ನವಾಯಿತು.
ಜಾನಕಿರಾಮೇಶ್ವರ ದೇವಸ್ಥಾನದಲ್ಲಿ ವೆಂಕಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಲ್ಲುದಾಸ್ ಮಹಾರಾಜ್, ಶ್ರೀರಾಮಸೇನೆ ಉತ್ತರ ಪ್ರಾಂತದ ಗೌರವಾಧ್ಯಕ್ಷ ಶ್ರೀ ಸತ್ಯ ಪ್ರಭುದೆಂದ್ರ ಸ್ವಾಮೀಜಿ, ರಾಮದುರ್ಗ ನಗರದ ಉದ್ಯಮಿಗಳಾದ ಚನ್ನಬಸವರಾಜ ಹಿರೇರಡ್ಡಿ ಹಾಗೂ ವೆಂಕಟೇಶ ಹಿರೇರಡ್ಡಿ ಇವರು ಸಹಸ್ರ ದೀಪೋತ್ಸವಕ್ಕೆ ಚಾಲನೆ ನೀಡಿದರು.
ತಾಯಂದಿರು, ಭಕ್ತಾದಿಗಳು ದೀಪಗಳನ್ನು ಹಚ್ಚಿ ಖುಷಿ ಪಟ್ಟರು. ಭಜನೆ ಸಂಕೀರ್ತನೆ ಹಾಡುಗಳಿಂದ ದೇವಸ್ಥಾನವು ನಳನಳಿಸುತ್ತಿತ್ತು. ವಿಶ್ವಹಿಂದೂ ಪರಿಷತ್, ಬಜರಂಗದಳ ರಾಮದುರ್ಗ ಪ್ರಖಂಡದ ಅಧ್ಯಕ್ಷ ಪ್ರಕಾಶ ಸೂಳಿಬಾವಿ ಸೇರಿದಂತೆ ಸರ್ವ ಸದಸ್ಯರೂ, ನಗರದ ಹಿರಿಯರು, ತಾಯಂದಿರು ಹಾಗೂ ಮಕ್ಕಳು ಭಾಗವಹಿಸಿದ್ದರು.


