ಜಮಖಂಡಿ: ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡದ ಕಂಪು ಹರಡಿಸಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಕೀರ್ತಿ ಅಲ್ಲಿನ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಹೇಳಿದರು.
ನಗರದ ಹೊರವಲಯದ ಆಲಗೂರ ಆರ್ಸಿಯಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶ್ರೀ ವಿಶ್ವಗುರು ಬಸವಣ್ಣ ಸಾಹಿತ್ಯ ಸಂಘ ಹಾಗೂ ಆದರ್ಶ ವಿದ್ಯಾಲಯದ ಸಜಯೋಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಹಬ್ಬ ಕಾರ್ಯಕ್ರಮ ಹಾಗೂ ೨೦೨೪-೨೫ ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ೩೧ ವಿದ್ಯಾರ್ಥಿಗಳಿಗೆ ಕನ್ನಡದ ಕಣ್ಮಣಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ವಿಷಯಕ್ಕೆ ಅತಿ ಹೆಚ್ಚು ಅಂಕಗಳನ್ನು ಪಡೆದ ಶಾಲೆಗಳಲ್ಲಿ ಆದರ್ಶ ವಿದ್ಯಾಲಯ ಅಗ್ರಸ್ಥಾನದಲ್ಲಿದೆ. ಒಂದು ಮರದ ಹೂವು, ರೆಂಬೆ, ಎಲೆಗಳು ಎಷ್ಟೇ ಸಮೃದ್ಧವಾಗಿದ್ದರು ಅದರ ಬೇರುಗಳಂತಿರುವ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು.
ನಾವಲಗಿ ಪಪೂ ಕಾಲೇಜಿನ ಉಪನ್ಯಾಸಕ ಭೀಮಪ್ಪ ಕುಂಬಾರ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ ಅದು ಸಾಹಿತ್ಯದ ವೈಭವ ಮತ್ತು ಶೌರ್ಯದ ಸಂಕೇತದ ತಾಣವಾಗಿದೆ. ವಿದ್ಯಾರ್ಥೀಗಳಿಗೆ ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡವಾಗಿರಬೇಕು. ಕನ್ನಡದ ಬಗ್ಗೆ ಮತ್ತು ಕನ್ನಡಿಗರ ಬಗ್ಗೆ ಹೆಮ್ಮೆ ಪಡಬೇಕು. ನವೆಂಬರ್ ಇಡಿ ತಿಂಗಳು ರಾಜ್ಯವಲ್ಲದೆ ವಿದೇಶಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವದು ಕನ್ನಡದ ಹಿರಿಮೆ ಎತ್ತಿ ತೋರಿಸುತ್ತದೆ ಎಂದರು.
ಈ ನಾಡು ರನ್ನನ ನಾಡು ಅವರು ತಮ್ಮ ಮಹಾಕಾವ್ಯಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಅವರು ಪ್ರಭಾವಶಾಲಿ ಬರಹಗಾರರಾಗಿದ್ದರು. ಅವರಿಗೆ ಕವಿ ತಿಲಕ, ಉಭಯ ಕವಿ, ಶಕ್ತಿ ಕವಿ ಎಂಬ ಹತ್ತು ಹಲವಾರು ನಾಮಾಂಕಿತರಾಗಿದ್ದವರು. ಅಂತಹ ಮಣ್ಣಿನಲ್ಲಿ ಜನಿಸಿದ ನೀವು ಈ ಬಾರಿ ೩೧ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರೆ ಮುಂದಿನ ವರ್ಷ ೬೨ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿ ಎಂದು ಶುಭ ಹಾರೈಸಿದರು.
ಮುಖ್ಯ ಶಿಕ್ಷಕ ನರಸಿಂಹ ಕಲ್ಲೋಳ್ಳಿ ಮಾತನಾಡಿ, ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಎಷ್ಟು ಮುಖ್ಯವೋ ಅಷ್ಟೇ ವಿದ್ಯಾರ್ಥಿಗಳ ಪ್ರಯತ್ನ ಬೇಕು. ಪ್ರಯತ್ನ ಪಟ್ಟರೆ ಯಾವುದು ಅಸಾಧ್ಯವಲ್ಲ ಪ್ರಯತ್ನಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಅದಕ್ಕೆ ಸಾಕ್ಷಿ ಇಂದಿನ ಕಾರ್ಯಕ್ರಮ. ಇದಕ್ಕೆ ಈ ವಿದ್ಯಾಲಯದ ಎಲ್ಲ ಬೋಧಕ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ವಿದ್ಯಾರ್ಥೀಗಳು ಸಾಧನೆ ಮಾಡಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿದರು.
ಎಸ್ಡಿಎಮ್ಸಿ ಅಧ್ಯಕ್ಷ ದುಂಡಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು, , ಇಸಿಒ ಸಂಗಮೇಶ ವಿಜಾಪುರ ಇದ್ದರು.


