ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಬುನಾದಿ : ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ

Ravi Talawar
 ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಬುನಾದಿ : ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ
WhatsApp Group Join Now
Telegram Group Join Now

ಬೆಳಗಾವಿ:  ಕ್ರೀಡೆಯಲ್ಲಿ ಕಲಿಯುವ ಶಿಸ್ತು ಬದುಕಿನ ತಳಹದಿಗೆ ಅಡಿಪಾಯ. ಬೇರು ಮಟ್ಟದಲ್ಲಿ ಕ್ರೀಡಾ ಸ್ಫೂರ್ತಿ ತುಂಬಿ , ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ತಯಾರು ಮಾಡುವುದು ಇಂತಹ ಕ್ರೀಡಾ ಕೂಟದಿಂದ ಸಾಧ್ಯವಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು  ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “9 ನೇ ಅಂತರ್ ಕಾಲೇಜು ಅಥ್ಲೆಟಿಕ್ ಕೂಟ-2025-26” ರಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಕ್ರೀಡಾ ಪಟು ತನ್ನ ಸಾಮರ್ಥ್ಯ ಮತ್ತು ಪ್ರಪಂಚದ ಸಾಮರ್ಥ್ಯವನ್ನು ಅರಿತುಕೊಂಡು ಕ್ರೀಡೆಯಲ್ಲಿ ತೊಡಗಿದಾಗ ಅವನು ಸಲೀಸಾಗಿ ಗುರಿಯನ್ನು ತಲುಪುತ್ತಾನೆ.

ಈ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸುವ ಸುವರ್ಣಾವಕಾಶ. ಇದು ವಿದ್ಯಾರ್ಥಿಗಳ ಕನಸುಗಳನ್ನು ನನಸು ಮಾಡುವ ವೇದಿಕೆಯಿದಾಗಲಿದೆ. ಗೆಲುವು ಮಾತ್ರ ಗುರಿಯಾಗಿರದೆ, ಒಳ್ಳೆಯ ಕ್ರೀಡಾಪಟುಗಳಾಗಿ, ಶಿಸ್ತು, ಸಹಕಾರ, ಧೈರ್ಯ ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸಿ ಎಂದು ಕ್ರೀಡಾ ಪಟುಗಳಿಗೆ ಕಿವಿ ಮಾತು ಹೇಳಿದರು.

ಸಮಕಾಲೀನ ಸಂದರ್ಭದಲ್ಲಿ ಕ್ರೀಡೆ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮಹತ್ತರ ಕ್ಷೇತ್ರವಾಗಿದೆ.  ಕ್ರೀಡೆಗೆ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿಯಿದೆ. ಪ್ರಸ್ತುತ ಕ್ರೀಡೆಯ ಕುರಿತಾದ ಧೋರಣೆ ಭಾರತದಲ್ಲಿ ಬದಲಾಗಿದೆ. ಅದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಬದಲಾಗಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ 106 ಕಾಲೇಜುಗಳಲ್ಲಿ ಮಾತ್ರ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದಾರೆ. ಉಳಿದ ಕಾಲೇಜುಗಳಲ್ಲಿ ಇಲ್ಲ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಒಟ್ಟೊಟ್ಟಿಗೆ ಸಾಗಬೇಕು. ಆಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆ. ಇಲ್ಲಾ ಅಂದರೆ  ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.  ಪ್ರತಿಯೊಂದು ಕಾಲೇಜಿನಲ್ಲೂ ಕ್ರೀಡಾ ಶಿಕ್ಷಕರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು. ಮಾಡಿಕೊಳ್ಳದಿದ್ದರೆ ಅಂಥ ಕಾಲೇಜುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸರಕಾರದ ಗಮನಕ್ಕೂ ತರಲಾಗುವುದು ಎಂದರು.

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ ಅವರು ಆಟಗಾರರು ಮೈದಾನದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿಬೇಕು. ಆದಾಗ್ಯೂ ಜಯ-ಪರಾಜಯ ಎರಡೂ ಸಾಮಾನ್ಯ. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧರಿರಬೇಕು. ನಿಜವಾದ ಕ್ರೀಡಾಪಟು ಗೆಲುವಿಗಿಂತ ಹೆಚ್ಚಾಗಿ ಕ್ರೀಡಾಸ್ಫೂರ್ತಿಯನ್ನು ತೋರಿಸುತ್ತಾನೆ.

ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಇದರಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪ್ರಾಮಾಣಿಕವಾಗಿ ಪಾಲ್ಗೊಳ್ಳುವುದು ಮುಖ್ಯ. ಕ್ರೀಡೆಯು ನಮ್ಮ ಬದುಕನ್ನು ರೂಪಿಸುತ್ತದೆ. ಸಚಿನ್ ತೆಂಡೂಲ್ಕರ ಅವರು ಇಡೀ ಪ್ರಪಂಚಕ್ಕೆ ಪರಿಚಯವಾದುದು ಕ್ರೀಡೆಯ ಮೂಲಕ. ಅವರು ಅನೇಕ ಬಾರಿ ಸೋಲನ್ನು ಕಂಡರೂ ತಮ್ಮ ಗುರಿಯನ್ನು ಮಾತ್ರ ಬದಲಾಯಿಸಿಲ್ಲ. ಕೊನೆಗೂ ಅವರು ಜಗತ್ತಿನ ಕ್ರೀಡಾತಾರೆಯಾಗಿ ಕಂಗೊಳಿಸಿದರು. ಕ್ರೀಡೆಯನ್ನೇ ಬದುಕಾಗಿಸಿಕೊಂಡವರಿಗೆ ಇವರು ಸದಾ ಮಾದರಿ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಾಜಿ ಮೌಲ್ಯ ಮಾಪನ ಕುಲಸಚಿವರಾದ ಸುಂದರ ರಾಜ ಅರಸ್ ಅವರು ಮಾತನಾಡಿ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕಳೆದ ಎರಡು ವರ್ಷಗಳಿಂದ ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಿದೆ. ಇತ್ತೀಚೆಗೆ ರಾಣಿ ಚನ್ನಮ್ಮ  ವಿಶ್ವವಿದ್ಯಾಲಯವು ಮೊದಲ ಬಾರಿಗೆ ದಕ್ಷಿಣ ಭಾರತದ ವಿಶ್ವವಿದ್ಯಾಲಯಗಳ ಕ್ರೀಡಾ ಕೂಟವನ್ನು ಏರ್ಪಡಿಸಿ ಚಾರಿತ್ರಿಕವಾಗಿ ಮೈಲುಗಲ್ಲನ್ನು ಸಾಧಿಸಿತು ಎಂದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಈಜು ತರಬೇತುದಾರರಾದ ಉಮೇಶ ಕಲಘಟಗಿ ಅವರನ್ನು ಸನ್ಮಾನಿಸಲಾಯಿತು.
ಕಾವ್ಯ  ಬಡಿಗೇರ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಕ್ರೀಡಾ ಜ್ಯೋತಿಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಶಶಾಂಕ ಪಾಟೀಲ್, ರಾಷ್ಟ್ರೀಯ ಕ್ರೀಡಾಪಟುಗಳಾದ ವೈಭವಿ ಬುದ್ರುಕ್, ಅಪೂರ್ವ ನಾಯ್ಕ, ಶ್ರೀನಾಥ ದಳವಿ ಅವರು  ಬೆಳಗಿದರು. ರಾಚವಿ ಕ್ರೀಡಾ ವಿಭಾಗದ ದೈಹಿಕ ನಿರ್ದೇಶಕರಾದ ಡಾ ಜಗದೀಶ ಗಸ್ತಿ ಅವರು ಕ್ರೀಡಾ ಜ್ಯೋತಿ ಬೆಳಗಿದ ಕ್ರೀಡಾ ಪಟುಗಳನ್ನು ಪರಿಚಯಿಸಿದರು.

ಬೆಳಗಾವಿಯ ನಿಶ್ ಟ್ರೀ ಸಂಸ್ಥೆಯ ಸಂಸ್ಥಾಪಕರಾದ ಸಂತೋಷ ಹರಗೋಳಿ ಅವರು 250 ವಿದ್ಯಾರ್ಥಿಗಳಿಗೆ ಕ್ಯಾಪ್ ನೀಡಿ ಪ್ರೊತ್ಸಾಹಿಸಿದರು. ಜೊತೆಗೆ ಪ್ರತಿ ಕ್ರೀಡಾ ಸ್ಪರ್ಧೆಯಲ್ಲಿ ಹೊಸ ದಾಖಲೆ ನಿರ್ಮಿಸಿದವರಿಗೆ ವಿಶೇಷವಾಗಿ ನಗದು ಬಹುಮಾನ ನೀಡುವುದಾಗಿ ಹೇಳಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಸ್. ಸಿ. ಪಾಟೀಲ್ ಉಪಸ್ಥಿತರಿದ್ದರು.

ಡಾ. ರವಿ ಗೋಲಾ ಸ್ವಾಗತಿಸಿದರು, ಡಾ. ಪ್ರೀತಿ ಪದಪ್ಪಗೋಳ ಹಾಗೂ ಲಾವಣ್ಯ ಗುಂಜಾಳ  ನಿರೂಪಿಸಿದರು, ಡಾ . ಪ್ರಿಯಾಂಕಾ ಜೋಗಿನಕಟ್ಟಿ ವಂದಿಸಿದರು.

ಕ್ರೀಡಾಕೂಟದಲ್ಲಿ ಬೆಳಗಾವಿ, ವಿಜಯಪುರ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಾಪಕರು ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article