ಸಂವಿಧಾನ ದಿನಾಚರಣೆ-2025ರ
ಕೊಪ್ಪಳ ನವೆಂಬರ್ 26 (ಕರ್ನಾಟಕ ವಾರ್ತೆ): ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸುಂದರ ಮತ್ತು ಅದ್ಬುತವಾಗಿದ್ದು, ಭಾರತವು ವಿಶ್ವದ ಅತೀ ದೊಡ್ಡ ಸಂವಿಧಾನವನ್ನು ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು.
ಅವರು ಬುಧವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ-2025ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವತ್ಗೀತೆಗಳು ಎಷ್ಟು ಪ್ರಮುಖ್ಯತೆಯನ್ನು ಪಡೆದಿವೆಯೋ ಅವುಗಳಿಗೆ ಸರಿಸಮನಾಗಿರುವಂತಹ ಗ್ರಂಥ ಭಾರತದ ಸಂವಿಧಾನವಾಗಿದೆ. ನಮ್ಮ ದೇಶದ ಸಂವಿಧಾನವು ಎಲ್ಲಾ ದೇಶಗಳಿಗಿಂತ ಮೀಗಿಲಾಗಿರುವಂತಹ ಸಂವಿಧಾನ. ಇದು ಕೇವಲ 300 ರಿಂದ 400 ಪುಟಗಳನ್ನು ಹೊಂದಿರುವ ಪುಸ್ತಕವಲ್ಲ. ಈ ಗ್ರಂಥಕ್ಕೆ ತನ್ನದೆಯಾದ ಮಹತ್ವವಿದೆ. ಸಂವಿಧಾನವನ್ನು ಅಂಗೀಕರಿಸಿ ಅದನ್ನು ಜಾರಿಗೊಳಿಸಿದ್ದು, ಇಲ್ಲಿಯವರೆಗೆ ನಮ್ಮ ದೇಶವು ಸುರಕ್ಷಿತವಾಗಿ ನಡೆಯುತ್ತಿದೆ. ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತಾತ್ಮಕವಾಗಿರುವಂತಹ ದೇಶವಾಗಿದೆ. ಭಾರತದೊಂದಿಗೆ ಸ್ವಾತಂತ್ರ್ಯ ಹೊಂದಿದ ಎಷ್ಟೋ ದೇಶಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಆದರೆ, ಸ್ವಾತಂತ್ರ್ಯದ ನಂತರ 75 ಕ್ಕೂ ಹೆಚ್ಚು ವರ್ಷಗಳನ್ನು ಕಳೆದರು ಸಹ ನಮ್ಮ ದೇಶವು ಸುಭದ್ರವಾಗಿ ನಡೆದು ಆ ಎಲ್ಲಾ ದೇಶಗಳಿಗೆ ಮಾದರಿಯಾಗಿದೆ ಎಂಬುವುದಕ್ಕೆ ನಮ್ಮ ಸಂವಿಧಾನವೇ ಮುಖ್ಯ ಕಾರಣವಾಗಿದೆ ಎಂದರು.
ಜಾಗತಿಕವಾಗಿ ಹೆಸರಾದ ಮತ್ತು ಅನೇಕ ದೇಶಗಳಿಗೆ ಮಾದರಿಯಾದ ಸಂವಿಧಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಸದಾಕಾಲ ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಂವಿಧಾನ ಪೀಠಿಕೆಯನ್ನು ನಾವೆಲ್ಲರೂ ಓದಿ ಅದನ್ನು ಅರ್ಥೈಯಿಸಿಕೊಳ್ಳಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಸಂವಿಧಾನವನ್ನು ಸಹ ಓದಿಕೊಳ್ಳುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಸಂವಿಧಾನವು ನಮಗೆ ಸಾಮಾಜಿಕ ಸಮಾನತೆ, ನ್ಯಾಯ, ಕಾನೂನಾತ್ಮಕ ರಕ್ಷಣೆಯನ್ನು ಒದಗಿಸುತ್ತದೆ. ಸಂವಿಧಾನವು ನಮಗೆ ಹಕ್ಕುಗಳ ಜೊತೆಗೆ ವಿಶೇಷವಾಗಿ ಕರ್ತವ್ಯಗಳನ್ನು ಸಹ ನೀಡಿದೆ. ಹಾಗಾಗಿ ಅವುಗಳನ್ನು ನಾವೆಲ್ಲರು ಪಾಲಿಸಬೇಕು. ಪ್ರತಿಯೊಬ್ಬರು ಸಂವಿಧಾನವನ್ನು ಓದಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಂಜುನಾಥ ಹಿರೇಮಠ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು, ಅತ್ಯಂತ ದೊಡ್ಡ ಸಂವಿಧಾನವನ್ನು ಹೊಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಿಖಿತ ರೂಪದ ಸಂವಿಧಾನ ಎಂದು ಕರೆಯುತ್ತೇವೆ. ನಮ್ಮ ದೇಶಕ್ಕೆ ಪ್ರತ್ಯೇಕವಾದ ಸಂವಿಧಾನ ಬೇಕೆಂದು 1934 ರಲ್ಲಿಯೇ ಬ್ರಿಟಿಷರಿಗೆ ಮನವಿ ಮಾಡಲಾಗಿತ್ತು. ಇದನ್ನು ಮನಗೊಂಡ ಬ್ರಿಟಿಷ್ ಅಧಿಕಾರಿಗಳು ಕ್ಯಾಬಿನೇಟ್ ಆಯೋಗದಲ್ಲಿದ್ದ ಮೂವರನ್ನು ಕರೆಸಿ, ಹೌದು ಭಾರತ ಸಂವಿಧಾನವನ್ನು ಪ್ರತ್ಯೇಕವಾಗಿಸುತ್ತೇವೆ. ಅದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಿಕೊಳ್ಳಿ ಎಂದು ಹೇಳಿದಾಗ ಸಂವಿಧಾನ ರಚನಾ ಸಮಿತಿಯು 1946ರ ಡಿಸೆಂಬರ್ 9ಕ್ಕೆ ಮೊಟ್ಟ ಮೊದಲಬಾರಿಗೆ ಸಭೆ ಸೇರಿತು. ಈ ಸಮಿತಿಗೆ ತಾತ್ಕಾಲಿಕವಾಗಿ ಸಚ್ಚಿದಾನಂದರನ್ನು ಆಯ್ಕೆ ಮಾಡಲಾಯಿತು. ನಂತರ ಡಾ. ಬಾಬು ರಾಜೇಂದ್ರ ಪ್ರಸಾದ ರವರಿಗೆ ಸಂವಿಧಾನ ರಚನಾ ಸಭೆಯ ಪೂರ್ಣಪ್ರಮಾಣದ ಅಧ್ಯಕ್ಷತೆಯನ್ನು ಕೊಡಲಾಯಿತು. ನಂತರ ಸಂವಿಧಾನ ಕರಡು ರಚನಾ ಸಮಿತಿಯ ಸಂಪೂರ್ಣ ಹೊಣೆಗಾರಿಕೆಯು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಸಿಗುತ್ತದೆ. ಅದನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ, ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನವಾದ ಹಕ್ಕುಗಳನ್ನು ನೀಡಿದ್ದಾರೆ. ಇಂದು ನಮ್ಮ ದೇಶ ಅಖಂಡ ಭಾರತವಾಗಿ, ಭವ್ಯ ಭಾರತವಾಗಿ, ಸಮಾನತೆಯ ಭಾರತವಾಗಿ ನಿಂತಿರಲು ನಮ್ಮ ಸಂವಿಧಾನ ಮೂಲವಾಗಿದ್ದು, ಇದರ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂದರು.
ಹಲವಾರು ಪದವಿಗಳನ್ನು ಪಡೆದಿರುವ ಕಾನೂನು ತಜ್ಞರು, ಸಂಶೋಧಕರು, ಆರ್ಥಿಕ ತಜ್ಞರು ಆಗಿರುವ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನ ರಚನೆಗೂ ಮುನ್ನ ಸುಮಾರು 58 ದೇಶಗಳ ಮತ್ತು ಅನೇಕ ದೇಶಗಳ ಸಂವಿಧಾನಗಳ ಕುರಿತು ಅಧ್ಯಯನ ಮಾಡಿದ್ದರು. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ರವರು ಕರಡನ್ನು ರಚನೆ ಮಾಡಿಕೊಂಡು ಒಂದು ಗುಣಮಟ್ಟ ಆಧಾರಿತ ಸಂವಿಧಾನವನ್ನು ದೇಶಕ್ಕೆ ನೀಡಿದರು. ಇಂದು ನಮ್ಮ ಭಾರತದ ಸಂವಿಧಾನವು ಜಗತ್ತಿನ ಅತೀ ದೊಡ್ಡ ಸಂವಿಧಾನ ಆಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.*ಬಹುಮಾನ ವಿತರಣೆ:* ಸಂವಿಧಾನ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
*ಜಾಗೃತಿ ಜಾಥಾ:* ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಕೊಪ್ಪಳ ನಗರದಲ್ಲಿರುವ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್. ಬಸವೇಶ್ವರ ಹಾಗೂ ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಪುಷ್ಪ ನಮನ ಸಲ್ಲಿಸಿದ ನಂತರ ತಾಲ್ಲೂಕು ಕ್ರೀಡಾಂಗಣಕ್ಕೆ ತೆರಳಿ ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಜಗದೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಕೊಪ್ಪಳ ತಹಶಿಲ್ದಾರ ವಿಠಲ ಚೌಗಲಾ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರೆ ಹಲವಾರು ಜನರು ಉಪಸ್ಥಿತರಿದ್ದರು.


