ಧಾರವಾಡ : ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಲಿಖಿತ ಸಂವಿಧಾನ ನಮ್ಮದು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ನಮ್ಮ ಸಂವಿಧಾನ ರಚನೆಯಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಸಂಯುಕ್ತವಾಗಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಅವರು ತಿಳಿಸಿದರು.
ನಮ್ಮ ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ. ಅದು ನಮ್ಮ ದೇಶದ ಆತ್ಮವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರ ಹೋರಾಟ, ಶಿಕ್ಷಣ ಮತ್ತು ಸಾಧನೆಗಳು ನಮಗೆ ಸ್ಫೂರ್ತಿ. ಆದರೆ, ಅಂಬೇಡ್ಕರ್ ಅವರಂತಹ ಮಹಾನ್ ಚೇತನವನ್ನು ಜಗತ್ತಿಗೆ ನೀಡಲು ಅವರ ತಾಯಿ ಭೀಮಾಬಾಯಿ ಅವರು ಪಟ್ಟ ಪಾಡು ಮತ್ತು ತ್ಯಾಗ ಅಷ್ಟಿಷ್ಟಲ್ಲ. ಇಂದು ನಾವು ಆ ಮಹಾನ್ ತಾಯಿಯನ್ನೂ ಸ್ಮರಿಸಬೇಕು ಎಂದು ಅವರು ಹೇಳಿದರು.
ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪೆÇ್ರಫೆಸರ್ ಹುದ್ದೆ ಖಾಲಿ ಇತ್ತು. ಅಂಬೇಡ್ಕರ್ ಅವರ ಅಗಾಧ ಕಾನೂನು ಜ್ಞಾನ ಮತ್ತು ವಿದ್ವತ್ತಿನ ಅರಿವಿದ್ದ ಹುಬ್ಬಳ್ಳಿಯ ಸರ್ ಸಿದ್ದಪ್ಪ ಕಂಬಳಿಯವರು ಈ ಹುದ್ದೆಗೆ ಅಂಬೇಡ್ಕರ್ ಅವರೇ ಸೂಕ್ತ ಎಂದು ನಿರ್ಧರಿಸಿದರು. ಆದರೆ, ಅಂಬೇಡ್ಕರ್ ಅವರಿಗೆ ಈ ಹುದ್ದೆ ನೀಡುವುದಕ್ಕೆ ಅಂದಿನ ಆಡಳಿತ ವರ್ಗ ಮತ್ತು ಮೇಲ್ವರ್ಗದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಸರ್ ಸಿದ್ದಪ್ಪ ಕಂಬಳಿಯವರು ಯಾರಿಗೂ ಜಗ್ಗದೆ ತಮ್ಮ ಅಧಿಕಾರವನ್ನು ಬಳಸಿ ಅಂಬೇಡ್ಕರ್ ಅವರನ್ನು ಜೂನ್ 1928 ರಲ್ಲಿ ಸರ್ಕಾರಿ ಲಾ ಕಾಲೇಜಿನ ಪ್ರಾಧ್ಯಾಪಕರನ್ನಾಗಿ ನೇಮಿಸಿದರು ಎಂಬುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಶಾಸಕರಾದ ಎನ್.ಎಚ್. ಕೋನರೆಡ್ಡಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಇಲ್ಲದೇ ಹೋಗಿದ್ದಲ್ಲಿ, ಇಂದು ಸಮಾಜದ ಜನರು ಗ್ರಾಮ ಪಂಚಾಯಿತ್ ಸದಸ್ಯರಾಗಲಿ ಅಥವಾ ಶಾಸಕರಾಗಲಿ ಆಗಲು ಸಾಧ್ಯವಿರುತ್ತಿರಲಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ಇಡೀ ಮನುಕುಲದ ವಿಮೋಚಕರು. ಅವರ ವೈಚಾರಿಕ ನಿಲುವುಗಳು ಮತ್ತು ಸಮಾನತೆಯ ತತ್ವಗಳನ್ನು ಅಳವಡಿಸಿಕೊಂಡರೆ ಮಾತ್ರ ನಾವು ನಿಜವಾದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಲು ವಿದ್ಯಾರ್ಥಿಗಳು ಸಂವಿಧಾನವನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಅವಶ್ಯ ಎಂದು ಜಿಲ್ಲಾಧೀಕಾರಿ ದಿವ್ಯ ಪ್ರಭು ಅವರು ಹೇಳಿದರು.
ಸಂವಿಧಾನ ಶಿಲ್ಪಿ, ಭಾರತದ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಜ್ಞಾನದ ಸಂಕೇತವಾಗಿದ್ದಾರೆ. ಲಂಡನ್ನಿನ ಪ್ರತಿಷ್ಠಿತ ಗ್ರಂಥಾಲಯದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಾಪಿಸಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಅವರು ಬದುಕಿದ್ದ ಕಾಲದಲ್ಲಿ ನಮ್ಮ ದೇಶದಲ್ಲಿ ಜಾತಿ ಪದ್ಧತಿ ತೀವ್ರವಾಗಿತ್ತು. ದಲಿತರು ಮತ್ತು ಕೆಳವರ್ಗದ ಜನರು ಸ್ವಚ್ಛವಾದ ಬಟ್ಟೆ ಧರಿಸುವುದನ್ನು, ಚಪ್ಪಲಿ ಹಾಕುವುದನ್ನು ಮೇಲ್ವರ್ಗದವರು ಸಹಿಸುತ್ತಿರಲಿಲ್ಲ. ಅಂತಹ ಸನ್ನಿವೇಶದಲ್ಲಿ, ಅಂಬೇಡ್ಕರ್ ಅವರು ವಿದೇಶಿ ದೊರೆಗಳಂತೆ ಸೂಟು-ಬೂಟು ಧರಿಸುತ್ತಿದ್ದರು. ವಿದ್ಯೆ ಮತ್ತು ಬುದ್ಧಿವಂತಿಕೆಯಲ್ಲಿ ನಾವೂ ಕಡಿಮೆಯಿಲ್ಲ, ಎಂಬ ಸಂದೇಶವನ್ನು ಅವರು ತಮ್ಮ ಉಡುಪಿನ ಮೂಲಕ ಸಮಾಜಕ್ಕೆ ಸಾರಿದರು ಎಂದು ಜಿಲ್ಲಾಧಿಕಾರಿಗಳು ಮಕ್ಕಳಿಗೆ ಹೇಳಿದರು.
ಕೆ.ಯು.ಎಸ್.ಕೆ. ಕಾನೂನು ಮಹಾವಿದ್ಯಾಲಯ ಪ್ರಾಧ್ಯಾಪಕಿ ಹಾಗೂ ಪ್ರಾಂಶುಪಾಲರಾದ ಡಾ.ಮಂಜುಳಾ ಎಸ್.ಆರ್.ಅವರು ಸಂವಿಧಾನ ಆಚರಣೆಯ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಇದ್ದರು.
ಸಂವಿಧಾನ ಜಾಗೃತಿ ಜಾಥಾ: ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಸಂವಿಧಾನ ಜಾಗೃತಿ ಜಾಥಾ ನಡಿಗೆಯು ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತ (ಜುಬ್ಲಿ ಸರ್ಕಲ್) ಮಾರ್ಗವಾಗಿ ಡಾ.ಪಾಟೀಲ ಪುಟ್ಟಪ್ಪ ಸಭಾಭವನದವರೆಗೆ ಮೆರವಣಿಗೆಯು ಜರುಗಿತು. ಜಾಥಾ ಕಾರ್ಯಕ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಂಚೇತಕರಾದ ಸಲೀಂ ಅಹ್ಮದ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ ಅವರು ಸ್ವಾಗತಿಸಿ, ಸಂವಿಧಾನ ಪಿಠೀಕೆಯನ್ನು ಬೋಧಿಸಿದರು. ಶಿಕ್ಷಕ ಪ್ರವೀಣ ಮಸಗಿ ಅವರು ನಿರೂಪಸಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.


