ಇಡೀ ಜಗತ್ತಿಗೆ ಮಾದರಿ ಮತ್ತು ಉತ್ಕೃಷ್ಟವಾದ ಸಂವಿಧಾನ ನಮ್ಮದು – ತಹಶೀಲ್ದಾರ ಸಿದರಾಯ ಬೋಸಗಿ

Pratibha Boi
ಇಡೀ ಜಗತ್ತಿಗೆ ಮಾದರಿ ಮತ್ತು ಉತ್ಕೃಷ್ಟವಾದ ಸಂವಿಧಾನ ನಮ್ಮದು – ತಹಶೀಲ್ದಾರ ಸಿದರಾಯ ಬೋಸಗಿ
WhatsApp Group Join Now
Telegram Group Join Now
ಅಥಣಿ : ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ಹೊಂದಿದ್ದ ಡಾ.ಬಿ ಆರ್. ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿ ಹಾಗೂ ಉತ್ಕೃಷ್ಟವಾದ ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಿಸಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಗೌರವಿಸಿ, ಸಂವಿಧಾನದ ವಿಷಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು
ತಹಶೀಲ್ದಾರ ಸಿದರಾಯ ಬೋಸಗಿ ಕರೆ ನೀಡಿದರು.
ಅವರು ಬುಧವಾರ ಇಲ್ಲಿನ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾವೈಕ್ಯತೆ, ಸಹೋದರತೆ, ಸಮಾನತೆ ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಡಾ. ಅಂಬೇಡ್ಕರ್ ಅವರು ಜಗತ್ತಿನ ಬಹಳಷ್ಟು ರಾಷ್ಟ್ರಗಳು ಸಂವಿಧಾನಗಳನ್ನು ಅಧ್ಯಯನ ಮಾಡಿ ಹಲವು ಧರ್ಮ, ಜಾತಿಗಳನ್ನು ಹೊಂದಿರುವ ಭಾರತಕ್ಕೆ ಸರ್ವರಿಗೂ ಸಮಬಾಳು ಮತ್ತು ಸಮಪಾಲು ದೊರಕುವ ನಿಟ್ಟಿನಲ್ಲಿ ಸಂವಿಧಾನವನ್ನು ಸಮರ್ಪಿಸಿದ್ದಾರೆ.ಭಾರತಕ್ಕೆ 1949ರ ನವೆಂಬರ್ 26 ರಂದು ಭಾರತದ ಸಂವಿಧಾನ ದಿನದಂದು ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದ ಕೀರ್ತಿ ಅಂಬೇಡ್ಕರ್‌ರವರಿಗೆ ಸಲ್ಲುತ್ತದೆ. ನಮ್ಮ ದೇಶದ ಸಂವಿಧಾನ 395 ವಿಧಿಗಳು, 22 ಭಾಗಗಳು, ಮತ್ತು 8 ಅನುಸೂಚಿಗಳೊಂದಿಗೆ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯಗಳನ್ನು ಪಾಲಿಸುವಂತೆ ಕರೆ ನೀಡಿದರು.
ಅಥಣಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಡಾ.ಅಂಬೇಡ್ಕರ್‌ರವರು ಸಂವಿಧಾನ ರಚಿಸಿ ಅಂಗಿಕರಿಸಿ 76 ವರ್ಷ ತುಂಬಿದೆ. ಸಂವಿಧಾನದ ಬಗ್ಗೆ ನಾವು ಅಲ್ಪ ಸ್ವಲ್ಪ ತಿಳಿದಿದ್ದೇವೆ. ಅಂಬೇಡ್ಕರ್ ಸಾಹೇಬರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದರಿಂದಲೇ ನಾನು ಕೂಡಾ ಇಂದು ಪುರಸಭೆ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ. ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನ ವಿಧಾನವಾಗಿಸಿಕೊಳ್ಳಬೇಕು. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವು ಅಧಿಕಾರ, ಹಕ್ಕುಗಳನ್ನು ನೀಡಿದ್ದರಿಂದಲೇ ಇಂದು ಪ್ರತಿಯೊಬ್ಬರೂ ಉತ್ತಮ ಬದುಕು ಕಟ್ಟಿಕೊಂಡಿದ್ದೇವೆ. ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು. ಜತೆಗೆ ಸಂವಿಧಾನದ ಆಶಯದಂತೆ ಮುಂದೆ ಸಾಗಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಜೆ. ಇ. ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಬಿ ಎಸ್ ಲೋಕುರ ತಮ್ಮ ಉಪನ್ಯಾಸದಲ್ಲಿ ಭಾರತದ ಸಂವಿಧಾನದ ಇತಿಹಾಸ ಮತ್ತು ಡಾ. ಅಂಬೇಡ್ಕರ್ ಅವರು ನೀಡಿದ ವಿಶೇಷ ಕೊಡುಗೆಯನ್ನು ಬಣ್ಣಿಸಿದರು.
ಸಮಾರಂಭದ ಆರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ಸಮಾರಂಭದಲ್ಲಿ ಪುರಸಭೆಯ ಉಪಾಧ್ಯಕ್ಷ  ಭುವನೇಶ್ವರಿ ಬೀರಪ್ಪ ಯಕ್ಕಂಚಿ, ತಾ. ಪಂ. ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ, ಪುರಸಭೆಯ ಮುಖ್ಯಅಧಿಕಾರಿ  ಅಶೋಕ ಗುಡಿಮನಿ, ಸಮಾಜ ಕಲ್ಯಾಣ ಇಲಾಖೆಯ  ಚಂದ್ರಕಾಂತ ಕಾಂಬಳೆ, ಸಿ.ಟಿ ಬಡಕಂಬಿ, ಬಿ ಬಿ ಘುಳಪ್ಪನವರ, ಶಂಕರ್ ನವಣಿ, ಗಣೇಶ್ ಪವಾರ, ವರ್ಧಮಾನ ನಾಗನೂರ, ನ್ಯಾಯವಾದಿ ಮಿತೇಶ್ ಪಟ್ಟಣ, ಶಶಿ ಬಾಡಗಿ, ಸಮಾಜ ಸೇವಕ ಮಹಾಂತೇಶ ಬಾಡಗಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪರಶುರಾಮ ಪತ್ತಾರ ಸ್ವಾಗತಿಸಿದರು. ಸಂಗಮೇಶ ಹಚಡದ ನಿರೂಪಿಸಿದರು. ಓ.ಐ ಅರಟಾಳ ವಂದಿಸಿದರು.

WhatsApp Group Join Now
Telegram Group Join Now
Share This Article