ಬೆಳಗಾವಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ಸಂವಿಧಾನ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ ಮಾತನಾಡಿ, ಭಾರತದ ಸಂವಿಧಾನದ ಕರಡು ರಚನೆ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಈ ಪ್ರಕ್ರಿಯೆ 1946ರ ಡಿಸೆಂಬರ್ 9ರಂದು ಪ್ರಾರಂಭವಾಗಿ ಎರಡು ವರ್ಷ, ಹನ್ನೊಂದು ತಿಂಗಳು, ಹದಿನೆಂಟು ದಿನಗಳಲ್ಲಿ ಪೂರ್ಣಗೊಂಡು, ಸಂವಿಧಾನವನ್ನು 1949ರ ನವೆಂಬರ್ 26ರಂದು ಸ್ವೀಕರಿಸಲಾಯಿತು ಎಂದು ಹೇಳಿದರು.
ಮೂಲಭೂತ ಕರ್ತವ್ಯಗಳು ಮೂಲ ಸಂವಿಧಾನದಲ್ಲಿ ಇರಲಿಲ್ಲ ಎಂದು ತಿಳಿಸಿದ ಅವರು ಅವುಗಳನ್ನು 1976 ರಲ್ಲಿ 42 ನೇ ತಿದ್ದುಪಡಿ ಮೂಲಕ ಪರಿಚಯಿಸಲಾಯಿತು. ಆಗ 10 ಕರ್ತವ್ಯಗಳನ್ನು ಉಲ್ಲೇಖಿಸಲಾಗಿತ್ತು. 2002ರಲ್ಲಿ ನಡೆದ 86 ನೇ ತಿದ್ದುಪಡಿ ಮೂಲಕ ಪೋಷಕರು ಮತ್ತು ಪಾಲಕರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಕರ್ತವ್ಯವನ್ನು ಸೇರಿಸುವ ಮೂಲಕ ಇದನ್ನು 11ಕ್ಕೆ ಹೆಚ್ಚಿಸಲಾಯಿತು. ಶಿಕ್ಷಣದ ಹಕ್ಕು ಕೇವಲ ಮೂಲಭೂತ ಹಕ್ಕು ಮಾತ್ರವಲ್ಲ, ಅದು ಮೂಲಭೂತ ಕರ್ತವ್ಯವೂ ಆಗಿದೆ,” ಎಂದು ಅವರು ಒತ್ತಿಹೇಳಿದರು.
ನ್ಯಾಯವಾದಿ, ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್. ಎಸ್. ಮುತಾಲಿಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ರಾಜಕೀಯ ಜಾಗೃತಿಯೂ, ಸಾಮಾಜಿಕ ಹೊಣೆಗಾರಿಕೆಯೂ ಹೊಂದಿರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಕಾನೂನು ಸೇವಾ ಪ್ರಾಧಿಕಾರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಡಿಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ,
ಕಾಲೇಜಿನ ಪ್ರಾಂಶುಪಾಲ ಡಾ. ಎ. ಎಚ್. ಹವಾಲ್ದಾರ್ ಉಪಸ್ಥಿತರಿದ್ದರು. ಕಾನೂನು ಸಹಾಯ ಘಟಕದ ಸಂಯೋಜಕ ಪ್ರೊ. ಚೇತನಕುಮಾರ ಟಿ. ಎಂ. ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಸಚಿನ್ ಕೋಟಗಿ ವಂದಿಸಿದರು.


