ಪೋಸ್ಟರ್ ಹಾಗೂ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಸೆಟ್, ಶೂಟಿಂಗ್ ವಿಚಾರವಾಗಿಯೂ ಸಿನಿಮಾಪ್ರೇಮಿಗಳಿಗೆ ಕುತೂಹಲ ಹೆಚ್ಚಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್ ಎಂಟ್ರಿ ಕೊಟ್ಟಿದ್ದಾರೆ.
ತಮ್ಮ ಅಭಿನಯದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಮೋಹನ್ ಪವರ್ ಸ್ಟಾರ್ ಪವನ್ ಕಲ್ಯಾಣ್, ನಾನಿ, ಧನುಷ್ ಹಾಗೂ ಶಿವಕಾರ್ತಿಕೇಯನ್ ಜೊತೆ ಅಭಿನಯಿಸಿರುವ ನಟಿ. ಹೇಮಂತ್ ಎಂ ರಾವ್ ನಿರ್ದೇಶನದ 80ರ ದಶಕದ ಬಾಂಡ್- ಸ್ಪೈ ಕಥೆ ಹೊಂದಿರುವ
‘666 ಆಪರೇಷನ್ ಡ್ರೀಮ್ ಥಿಯೇಟರ್’
ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ತೆಲುಗಿನ ಗ್ಯಾಂಗ್ಲೀಡರ್, ಸರಿಪೋದ ಶನಿವಾರಂ, ತಮಿಳಿನ ಡಾಕ್ಟರ್, ಟಿಕ್ಟಾಕ್, ಕ್ಯಾಪ್ಟನ್ ಮಿಲ್ಲರ್, ಬ್ರದರ್’ ಸಿನಿಮಾಗಳಲ್ಲಿ ಪ್ರಿಯಾಂಕ ಮೋಹನ್ ನಟಿಸಿದ್ದಾರೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮೋಹನ್, “ನಾನು ಡಾ. ಶಿವರಾಜ್ ಕುಮಾರ್ ಸರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನ ಭಾಗವಾಗುವುದು ನನ್ನ ಕನಸು ನನಸಾಗಿದೆ. ಅದ್ಭುತ ಪ್ರತಿಭಾನ್ವಿತ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಮತ್ತು ಇಂತಹ ಪಾತ್ರವರ್ಗದ ಭಾಗವಾಗುವುದು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಹೇಮಂತ್ ಎಂ ರಾವ್ ಅವರೊಂದಿಗೆ ಕೆಲಸ ಮಾಡುವುದನ್ನು ನಾನು ವ್ಯಕ್ತಪಡಿಸಿದ್ದೆ, ಆದರೆ ಅದು ಇಷ್ಟು ಬೇಗ ಆಗುತ್ತದೆ ಎಂದು ಭಾವಿಸಿರಲಿಲ್ಲ” ಎಂದುಹೇಳಿದ್ದಾರೆ.
ಡಾ. ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರಕ್ಕೆ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಡಿಸೆಂಬರ್ ಮೊದಲ ವಾರದಲ್ಲಿ ಮೂರನೇ ಹಂತದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದೆ.
ಶಿವಣ್ಣ ಹಾಗೂ ಧನಂಜಯ್ರ ರೆಟ್ರೋ ಲುಕ್, ಡಾ. ರಾಜ್ಕುಮಾರ್ ಅವರ ಸ್ಪೈ ಸಿನಿಮಾಗಳನ್ನು ನೆನಪಿಸುತ್ತವೆ. ಈ ರೆಟ್ರೋ ಸ್ಪೈ ಜಗತ್ತಿಗೆ ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಕ್ಯಾಮೆರಾ ವರ್ಕ್ ಇದೆ. ಹಿರಿಯ ಮೇಕಪ್ಮನ್ ಎನ್ ಕೆ ಉಮಾ ಮಹೇಶ್ವರ ಹಾಗೂ ಕಾಸ್ಟ್ಯೂಮ್ ಡಿಸೈನರ್ ಇಂಚರಾ ಸುರೇಶ್ ಈ ರೆಟ್ರೋ ಜಗತ್ತನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
|
|


