ಬೆಂಗಳೂರು, ನವೆಂಬರ್ 26: ಅಗತ್ಯ ವಸ್ತುಗಳ ಬೆಲೆ ಮೇಲಿಂದ ಮೇಲೆ ಏರಿಕೆಯಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಗಾಯದ ಮೇಲೆ ಬರೆ ಎಳೆಯುವಂತೆ ಪರಿಸ್ಥಿತಿ ಸೃಷ್ಟಿಸಿದೆ. ಅದರಲ್ಲೂ ನಿತ್ಯ ಅನಿವಾರ್ಯವಾದ ತರಕಾರಿಗಳು ಕೂಡ ಜನರ ಕೈಗೆಟುಕದಷ್ಟು (Vegetable Price) ದುಬಾರಿಯಾಗುತ್ತಿವೆ. ಅದರಲ್ಲೂ ಅಡುಗೆಗೆ ಕಡ್ಡಾಯವಾಗಿ ಬೇಕಾದ ಟೊಮೆಟೋ ಬೆಲೆ ಕೇಳಿ ಗ್ರಾಹಕರು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಾರ ಕೆಜಿಗೆ 30-40 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೋ ಪ್ರಸ್ತುತ 70-80 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೇಡಿಕೆಗೆ ತಕ್ಕಂತೆ ಟೊಮೆಟೋ ವಿತರಣೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಕೆಲವು ವ್ಯಾಪಾರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಪೂರೈಕೆ ಆಗುತ್ತಿಲ್ಲ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವ್ಯಾಪಾರಿ ಅಹಮದ್ ಎಂಬವರು ತಿಳಿಸಿದ್ದಾರೆ.
ಟೊಮೆಟೋ ಮಾತ್ರವಲ್ಲದೆ ಇನ್ನೂ ಹಲವು ತರಕಾರಿಗಳ ಬೆಲೆಯೂ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಟಾಣಿ, ಬೀನ್ಸ್, ಕ್ಯಾರೆಟ್, ನೌಕಲ್, ಬದನೇಕಾಯಿ, ಮೆಣಸಿನಕಾಯಿ ಸೇರಿ ಹತ್ತು ಹಲವು ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಿದೆ.


