ಭೂತರಾಮನಹಟ್ಟಿ ಗ್ರಾಮದಲ್ಲಿ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆ ಕಾರ್ಯಕ್ರಮ
ಬೆಳಗಾವಿ: ಗುಣಮಟ್ಟದ ಶಿಕ್ಷಣ ಪಡೆದರೆ ಮಾತ್ರ ಉತ್ತಮ ವೃತ್ತಿ, ಉತ್ತಮ ಸ್ಥಾನಮಾನ ದೊರೆಯಲು ಸಾಧ್ಯವಿದೆ. ಆದಕಾರಣ ಕ್ಷೇತ್ರದಲ್ಲಿ ಸುಮಾರು 200 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಕ್ಷೇತ್ರದ ಭೂತರಾಮನ ಹಟ್ಟಿ ಗ್ರಾಮದಲ್ಲಿ ಜಿ.ಪಂ, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಉನ್ನತಿಕರಿಸಿದ ಸರ್ಕಾರಿ ಪ್ರೌಢಶಾಲೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನರ, ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆ ಇಂದು ಈಡೇರಿಸಲಾಗಿದೆ. ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕಿದೆ, ಬೇರೆ ಕಡೆಗೆ ಶಿಕ್ಷಣ ಪಡೆಯಲು ಹೋದರೆ ಬಹಳಷ್ಟು ಸಮಯವಕಾಶ ಬೇಕು. ಸ್ವಂತ ಗ್ರಾಮದಲ್ಲಿ ಪ್ರೌಢ ಶಾಲೆಗಳು, ಕಾಲೇಜಗಳು ನಿರ್ಮಾಣವಾದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ. ಸರ್ಕಾರವೂ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ರೌಢ ಶಾಲೆಗಳನ್ನು ಆರಂಭಿಸುವ ಪ್ರಯತ್ನ ಮಾಡಬೇಕಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿಗೆ ಏಕಕಾಲಕ್ಕೆ 50 ಕೋಟಿ ಅನುದಾನ ನೀಡಿದ್ದೇನೆ. ಸಚಿವನಾದ ಬಳಿಕ, ಎರಡು ವರ್ಷ ಕಾಲಾವಧಿಯಲ್ಲಿ 113 ಶಾಲೆಗಳ ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಮೂರು ವರ್ಷ ಕಾಲಾವಧಿಯಲ್ಲಿ 87 ಶಾಲೆಗಳ ಅಭಿವೃದ್ಧಿ ಮಾಡುತ್ತೇನೆ. ದೇಶದಲ್ಲಿ ಐದು ವರ್ಷದ ಕಾಲಾವಧಿಯಲ್ಲಿ 200 ಶಾಲೆಗಳು ಅಭಿವೃದ್ಧಿಯಾಗುತ್ತಿರುವುದು ಯಮಕನಮರಡಿ ಕ್ಷೇತ್ರದಲ್ಲಿ ಮಾತ್ರ, ಈ ಕೇತ್ರವನ್ನು ಶೈಕ್ಷಣಿಕವಾಗಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇನೆಂದು ತಿಳಿಸಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಮಕ್ಕಳು ಪ್ರತಿದಿನ ಶಾಲೆಗೆ ಬಂದು ಅಧ್ಯಯನ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಬದುಕು ನಿರ್ಮಿಸಿಕೊಳ್ಳಬಹುದು. ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಬಸವಾದಿ ಶರಣರ ಕಾಲದಿಂದಲೂ ವಿರೋಧ ಮಾಡುವವರು ಇದ್ದಾರೆ. ವಿರೋಧಿಗಳ ನಡುವೆ ಕ್ಷೇತ್ರದ ಜನರು ನಮ್ಮನ್ನು ಕೈ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು.
ಸಿಎಂ ಸಿದ್ದರಾಮಯ್ಯನವರ ಸರ್ಕಾರದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಮೂಲಸೌಲಭ್ಯಗಳು ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿ ಬರಬೇಕೆಂಬ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುತ್ತಿದೆ. ಅಭಿವೃದ್ಧಿ ಮತ್ತು ಸಮಾಜ ಸುಧಾರಣೆಯಲ್ಲಿ ನಮ್ಮ ಸುತ್ತಮುತ್ತಲೂ ಉತ್ತಮ ಪೈಪೋಟಿ ಇರಬೇಕು. ಆಯಾ ಕ್ಷೇತ್ರಗಳಿಗೆ ಯಮಕನಮರಡಿ ಕ್ಷೇತ್ರ ಮಾದರಿಯಾಗಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ನೀಡುವುದು ಅವರ ಭವಿಷ್ಯಕ್ಕೆ ಮತ್ತು ಸಮಾಜದ ಒಟ್ಟಾರೆ ಪ್ರಗತಿಗೆ ಅವಶ್ಯಕವಾಗಿದೆ. ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಮಾತ್ರ ನಿಗದಿತ ಗುರಿಸಾಧನೆ ಮಾಡಲು ಸಾಧ್ಯ ಎಂದು ಸಚಿವರು ಹೇಳಿದರು.
ಗ್ರಾಪಂ ಸದಸ್ಯ ಬಾಲಕೃಷ್ಣ ಭೀಮಗೌಡ ಪಾಟೀಲ್ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಕೇವಲ ಎರಡು ವರ್ಷದ ಕಾಲಾವಧಿಯಲ್ಲಿ ಭೂತರಾಮನಹಟ್ಟಿ ಗ್ರಾಮದ ವಿವಿಧ ಕಾಮಗಾರಿಗೆ ಅಂದಾಜು 10 ಕೋಟಿ ಅನುದಾನ ನೀಡಿದ್ದಾರೆ. ಇದರಿಂದ ಬೀದಿ ದೀಪಗಳು, ಶುದ್ದ ಕುಡಿಯುವ ನೀರು , ಸಿಸಿ ರಸ್ತೆ, ಶಾಲೆಗಳ ಅಭಿವೃದ್ಧಿ ಆಗಿವೆ. ಈ ಭೂತರಾಮನಹಟ್ಟಿ ಗ್ರಾಮಕ್ಕೆ ಫ್ರೌಡಶಾಲೆಯನ್ನು ಕೂಡ ಮಂಜೂರು ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಯಮಕನಕಮರಡಿ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿಸಲು ಸಚಿವರು ಶ್ರಮಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ರಾಜ್ಯದ ಸಿಎಂ ಆಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿದ್ದು ಸುಣಗಾರ, ಪಕಿರಪ್ಪ ಗುಟಗುದ್ದಿ, ಸಂಜಯ , ರಾಮಣ್ಣ ಗುಳಿ, ಭೀಮಗೌಡ ಪಾಟೀಲ್, ಮುಸೆಪ್ಪಾ ಪಾಟೀಲ, ಶಿವರಾಯ ಪಾಟೀಲ್, ಅಶೋಕ ಪಾಟೀಲ್ , ಮಾರುತಿ ಚಿನಗುಳಿ, ಮಾರುತಿ ಚೌಗಲಾ, ಸಂಜಪ್ಪಾ ಕಟಾಬಳಿ, ಮಾರುತಿ ಪಾಟೀಲ್, ಕ್ಷೇತ್ರದ ಶಿಕ್ಷಣಾಧಿಕಾರಿ ಆಂಜನೇಯ , ಕಳಸಪ್ಪಾ ಪಾಟೀಲ, ಸಂಜಯ ನಾಯಕ, ಮಾಹದೇವಿ ಬಡಕುಂದ್ರಿ ಹಾಗೂ ಇತರರು ಇದ್ದರು


