ರಕ್ತದಾನ ಮಹತ್ವ ಕುರಿತು ಜಾಗೃತಿ ಮೂಡಿಸಿ: ಡಿಹೆಚ್ಒ ಡಾ.ಯಲ್ಲಾ ರಮೇಶ್ ಬಾಬು

Ravi Talawar
ರಕ್ತದಾನ ಮಹತ್ವ ಕುರಿತು ಜಾಗೃತಿ ಮೂಡಿಸಿ: ಡಿಹೆಚ್ಒ ಡಾ.ಯಲ್ಲಾ ರಮೇಶ್ ಬಾಬು
WhatsApp Group Join Now
Telegram Group Join Now

 

ಬಳ್ಳಾರಿ,ನ.24.:ಸಾರ್ವಜನಿಕರಿಗೆ ರಕ್ತದಾನ ಮಹತ್ವ ಕುರಿತು ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.

ಶುಕ್ರವಾರ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ರಕ್ತಹೀನತೆಯಿಂದ ಬಳಲುವಂತಹ ಗರ್ಭಿಣಿಯರಿಗೆ, ಅಪಘಾತ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ತುರ್ತಾಗಿ ರಕ್ತದ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡಬೇಕು. ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪುರುಷ ಮತ್ತು ಮಹಿಳೆಯರು ರಕ್ತದಾನ ಮಾಡುವ ಮೂಲಕ ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀಯರಿಗೆ, ಶಸ್ತ್ರಚಿಕಿತ್ಸಾ ಹೆರಿಗೆ ವೇಳೆ, ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಕ್ಕಾಗಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಥ್ಯಾಲಿಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳ ಜೀವವನ್ನು ಉಳಿಸುವ ಪುಣ್ಯದ ಕೆಲಸವಾಗಿದೆ.

ಜಗತ್ತಿನಲ್ಲಿ ಅತಿ ದೊಡ್ಡ ಸಂಶೋಧನೆ ಎಂದರೆ ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಉಪಯೋಗಿಸುವುದು, ಇದರಿಂದ ಹಲವಾರು ಜನರ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಸಾವಿನಿಂದ ಪಾರು ಮಾಡಲು ಸಾಧ್ಯವಿದ್ದು, ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರುವಂತೆ ಗ್ರಾಮೀಣ ಭಾಗದ ಜನರಿಗೆ, ನಗರ ಪ್ರದೇಶದ ಜನರಿಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ, ರಕ್ತವೇ ದೇಹದ ಜೀವನಾಡಿಯಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲದೇ ಇರುವುದರಿಂದ ಇನ್ನೊಬ್ಬ ವ್ಯಕ್ತಿಯು ರಕ್ತದಾನದ ಮೂಲಕ ಮಾತ್ರ ನಾವು ರಕ್ತವನ್ನು ಪಡೆಯಬಹುದಾಗಿದೆ. ಹಾಗಾಗಿ 18 ರಿಂದ 60 ವರ್ಷದ ಒಳಗಿನ ಎಲ್ಲಾ ಆರೋಗ್ಯವಂತ ಪುರುಷ ಮತ್ತ ಮಹಿಳೆಯರು ರಕ್ತದಾನ ಮಾಡುವ ಅವಕಾಶವಿದೆ ಎಂದು ತಿಳಿಸಿದರು.

45 ಕೆಜಿ ಮೇಲ್ಪಟ್ಟ ಹಾಗೂ 12.5  ಗ್ರಾಂ ಗಿಂತ ಹೆಚ್ಚು ಹಿಮೋಗ್ಲೊಬಿನ್ ಇರುವ ಮಹಿಳೆಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ, ತಪ್ಪದೇ ರಕ್ತದಾನವನ್ನು ಮಾಡುವ ಮೂಲಕ ದಾನಿಗಳು ತಮ್ಮ ಆರೋಗ್ಯ ಉಲ್ಲಾಸಮಯವಾಗಿಸಿಕೊಳ್ಳುವ ಜೊತೆಗೆ ಇನ್ನೊಬರ ಜೀವ ಉಳಿಸಬಹುದು ಎಂದರು.

ರಕ್ತದಾನ ಮಾಡುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ರಕ್ತದಾನವು ದಾನಿಗಳಿಗೆ ಯೋಗಕ್ಷೇಮದ ಭಾವನೆಯನ್ನು ನೀಡುತ್ತದೆ ಮತ್ತು ನಿಯಮಿತ ರಕ್ತದಾನವು ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಜಿಲ್ಲಾ ಮೇಲ್ವಿಚಾರಕ ಗಿರೀಶ್, ಲೆಕ್ಕಾಧಿಕಾರಿ ಹೊನ್ನೂರಪ್ಪ ಮತ್ತು ಐಸಿಟಿಸಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

WhatsApp Group Join Now
Telegram Group Join Now
Share This Article