ಬೆಳಗಾವಿ, ನವೆಂಬರ್ 22: ರಾಜ್ಯ ರಾಜಕೀಯದಲ್ಲಿ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ತೀವ್ರಗೊಳ್ಳುವ ಸುಳಿವು ದೊರೆತಿದೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕ ರಾಜು ಕಾಗೆ ಸೇರಿ 26 ಶಾಸಕರು ಪ್ರತ್ಯೇಕ ರಾಜ್ಯದ ಬೇಡಿಕೆ ಇಡಲಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಶನಿವಾರ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ದೀರ್ಘಕಾಲದಿಂದ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಹಾಗೂ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆ ಗಂಭೀರವಾಗಿ ಧ್ವನಿ ಎತ್ತಿದ್ದಾರೆ. ಈ ಪತ್ರ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನಾಗೇಶ್ ಗೋಲಶೆಟ್ಟಿ ಮಾಹಿತಿ ಪ್ರಕಾರ, ಈಗಾಗಲೇ 1,48,91,346 ಜನ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ 26 ಜನ ಶಾಸಕರ ಸಭೆ ಕರೆಯಲಾಗಿದೆ. ಡಿಸೆಂಬರ್ 11 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಕುರಿತು ಅಧಿಕೃತವಾಗಿ ಧ್ವನಿ ಎತ್ತಲಾಗುತ್ತದೆ.


