ರಾಮದುರ್ಗ: ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಹಾಗೂ ಉದ್ಯೋಗ ನೀಡಲು ಕಂಕಣ ಬದ್ಧವಾಗಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನದಡಿ ಐ.ಬಿ.ಪಿ.ಎಸ್, ಎಸ್.ಬಿ.ಐ ಮತ್ತು ಇನ್ನಿತರ ಬ್ಯಾಂಕ್‌ಗಳ ೧೨೦ ಗಂಟೆಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್-ಟಿವಿ ಬಳಕೆಯನ್ನು ತ್ಯಜಿಸಿ, ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ| ಆರ್.ಎಸ್. ಜಿರಂಕಳಿ ಮಾತನಾಡಿ, ವಿವಿಧ ಬ್ಯಾಂಕಗಳ ಆಶ್ರಯದಲ್ಲಿ ನಡೆಯುತ್ತಿರುವ ಯುವಜನರ ಉದ್ಯೋಗ ಕೌಶಲ್ಯ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕೆಂದರು.
ಪ್ರಾಚಾರ್ಯ ಡಾ. ಎಂ.ಡಿ. ಕಮತಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿ.ಎಂ.ಉಷಾ ಸಂಯೋಜಕ ಡಾ. ಎ.ಬಿ. ವಗ್ಗರ, ಡಾ. ಎಂ.ಆರ್. ದೊಡಮನಿ, ಡಾ. ಎ.ಸಿ. ಹುಲ್ಲೊಳ್ಳಿ, ಪವನಕುಮಾರ ಮಹೇಂದ್ರಕರ್, ಎಂ.ಎ. ನಕಾರ್ಚಿ, ಮಾರುತಿ ಸೂಳಿಕೇರಿ ಸೇರಿದಂತೆ ಕಾಲೇಜಿನ ಸಿ.ಡಿ.ಸಿ. ಕಮೀಟಿಯ ಸರ್ವಸದಸ್ಯರು, ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


