ಬಳ್ಳಾರಿ,ನ.೨೦: ದಶಕಗಳಿಂದ ಬಳ್ಳಾರಿಯಲ್ಲಿ ವೃದ್ಧಿಯಾಗುತ್ತಿದ್ದ ಜೀನ್ಸ್ ಉದ್ಯಮ ಇದೀಗ ಸಂಕಷ್ಟವನ್ನು ಎದುರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಏಕಾಏಕಿ ತೆಗೆದುಕೊಂಡ ಕ್ರಮದಿಂದ ಜಿಲ್ಲೆಯ ೩೬ ಜೀನ್ಸ್ ವಾಷಿಂಗ್ ಘಟಕಗಳು ರಾತ್ರೋರಾತ್ರಿಯಲ್ಲೇ ಮುಚ್ಚಲ್ಪಟ್ಟಿವೆ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಳ್ಳಾರಿಯ ಜೀನ್ಸ್ ಉದ್ಯಮ ಸಾವಿರಾರು ಮಧ್ಯಮವರ್ಗದ ಕುಟುಂಬಗಳ ಜೀವನದ ಆಧಾರವಾಗಿದ್ದು, ಸರ್ಕಾರದ ತೀರ್ಮಾನದಿಂದ ಉದ್ಯೋಗಾವಕಾಶಗಳು ತೀವ್ರವಾಗಿ ಕುಂಠಿತವಾಗಿವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಭೆಯಲ್ಲಿ ಕೆಕೆಆರ್‌ಡಿಬಿಯಿಂದ ೧೧ ಕೋಟಿ ಮತ್ತು ಕೆಐಎಡಿಬಿಯಿಂದ ೧೧ ಕೋಟಿ, ಒಟ್ಟೂ ೨೨ ಕೋಟಿ ರೂ. ಅನುದಾನ ನೀಡುವಂತೆ ನಿರ್ಧಾರವಾದುದನ್ನು ಅವರು ಪ್ರಸ್ತಾಪಿಸಿದರು. ಆದರೆ ಅನುದಾನ ನೀಡುವುದಕ್ಕಿಂತಲೂ ಉದ್ಯಮವನ್ನು ಉಳಿಸುವ ನೀತಿಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಅವರು ಹೇಳಿದರು.
ಬಳ್ಳಾರಿಯನ್ನು ದೇಶದಲ್ಲೇ ಪ್ರಸಿದ್ಧ ಜೀನ್ಸ್ ಹಬ್ ಎಂದು ಗುರುತಿಸಲಾಗಿದ್ದು, ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಜೀನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತವೆ. “ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಜೀನ್ಸ್ ಉದ್ಯಮಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದರು. ಆದರೆ ಇಂದು ಸರ್ಕಾರದ ಕ್ರಮಗಳು ಆ ಭರವಸೆಗೆ ವಿರುದ್ಧವಾಗಿವೆ” ಎಂದು ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಒಮ್ಮೆ ೬೦೦ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯಲ್ಲಿ ಈಗ ೩೦೦ಕ್ಕೂ ಇಳಿದಿವೆ.
“ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದೆ. ಸೀಸನಲ್ ಕೆಲಸ ಮಾತ್ರ ನಡೆಯುತ್ತಿದೆ. ಉಳಿದಷ್ಟು ಕಾಲ ಕಾರ್ಮಿಕರು ಖಾಲಿ ಕೈಯಾಗಿದ್ದಾರೆ” ಎಂದು ತಿಳಿಸಿದರು.
ಮಾಲ್ಸ್ ಮತ್ತು ಬ್ರ‍್ಯಾಂಡ್ ಸ್ಟೋರ್‌ಗಳ ಖರೀದಿ ಸಂಸ್ಕೃತಿಯಿAದ ಸ್ಥಳೀಯ ಉತ್ಪನ್ನಗಳ ಮಾರಾಟ ಕುಸಿದಿದ್ದು, ಪರಿಸರ ಮಾನದಂಡಗಳನ್ನು ಪೂರೈಸುವ ಸಿಇಟಿಪಿ ಘಟಕದ ನಿರ್ಮಾಣ ಬಹಳ ಕಾಲದಿಂದ ಬಾಕಿಯಿದೆ ಎಂದು ಅವರು ಹೇಳಿದರು.
ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮಕೈಗೊಂಡು ಜೀನ್ಸ್ ಉದ್ಯಮವನ್ನು ಮರುಜೀವಗೊಳಿಸುವುದು ಅಗತ್ಯ ಎಂದು ಸೋಮಶೇಖರ ರೆಡ್ಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೆಂಕಟರಮಣ, ಶ್ರೀನಿವಾಸ್ ಮೊತ್ಕಾರ್, ಗುಡಿಗಂಟಿ ಹನುಮಂತ, ಕೆ ಹನುಮಂತಪ್ಪ, ತಿಲಕ್, ಸೇರಿದಂತೆ ಅನೇಕರಿದ್ದರು


