ಹಸಿರು ಕ್ರಾಂತಿ ವರದಿ ಜಮಖಂಡಿ: ಭಾವನೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸಾಂಸ್ಕೃತಿಕ ಕಲೆ ಸಹಾಯಕವಾಗಿದೆ. ಕಲೆಯ ಮೂಲಕ ಸುಸಂಸ್ಕೃತರಾಗಿ ಜೀವನಕ್ಕೆ ವೈವಿದ್ಯಮಯ ಆಯಾಮ ಪಡೆಯಬೇಕು ಮತ್ತು ಒಳ್ಳೆಯ ಅರ್ಥ ಕಂಡುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಯ ಜಿಲ್ಲಾ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಹೇಳಿದರು.
ಜಮಖಂಡಿಯ ಬಸವಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ನೆಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಅವರು ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಮೊಬೈಲ್ ಯುಗದಲ್ಲಿ ಸಂಸ್ಕೃತಿ ಉಳಿಸಿಕೊಳ್ಳುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವಿದ್ಯಾರ್ಥಿಗಳಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಮತ್ತು ಭಾವನೆಗಳಿಗೆ ವೇದಿಕೆ ದಾರಿ ಮಾಡಿಕೊಡುತ್ತದೆ ಎಂದರು.
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ,ಬಸವರಾಜ ಕಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೌದ್ಧಿಕ, ಶಾರೀರಕ, ಆಧ್ಯಾತ್ಮಿಕ, ಮಾನಸಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆದು ಸರ್ವಾಂಗೀಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೌದ್ಧಿಕವಾಗಿ ಬೆಳೆಯಲು ಪಾಠ-ಪ್ರವಚನಗಳನ್ನು ಚೆನ್ನಾಗಿ ಆಲಿಸಬೇಕು. ಶಾರೀರಿಕವಾಗಿ ಬೆಳೆಯಲು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ನೈತಿಕತೆ ಮೈಗೂಡಿಸಿಕೊಂಡು ಆಧ್ಯಾತ್ಮಿಕವಾಗಿ ಬೆಳೆಯಬೇಕು. ಧ್ಯಾನ ಪ್ರಾಣಾಯಾಮ ಮಾಡಿ ಮಾನಸಿಕ ಬೆಳವಣಿಗೆ ಹೊಂದಬೇಕು. ಸಂಗೀತ, ನೃತ್ಯಗಳ ಮೂಲಕ ಸಾಂಸ್ಕೃತಿಕವಾಗಿ ಬೆಳೆಯಬೇಕು ಎಂದರು.
ಜಮಖಂಡಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ನಾಯಕೊಡೆ, ಹುನ್ನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಮುಂಡಗನೂರ, ಮೈಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಂ.ಎಲ್. ಪಾಟೀಲ ವೇದಿಕೆಯಲ್ಲಿದ್ದರು.
ಅಮೃತಾ ಬಳೋಲ ಪ್ರಾರ್ಥನೆ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮೌನೇಶ ಬಡಿಗೇರ, ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ ನಿರೂಪಿಸಿದರು. ಉಪನ್ಯಾಸಕಿ ಮಹಾದೇವಿ ಟಕ್ಕಳಕಿ ವಂದಿಸಿದರು.


