ನವದೆಹಲಿ: ನವೆಂಬರ್ 10, 2025ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಬಳಿ ನಡೆದ ಭೀಕರ ವಾಹನ ಸ್ಫೋಟದಲ್ಲಿ ಸುಮಾರು 15 ಮಂದಿ ಬಲಿಯಾಗಿದ್ದರು. ಈ ದಾಳಿ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಇದೀಗ ಈ ಬಗ್ಗೆ ತೀವ್ರ ತನಿಖೆ ನಡೆಯುತ್ತಿದ್ದು, ಈ ತನಿಖೆಯಲ್ಲಿ
ಪೊಲೀಸರಿಗೆ ಒಂದು ಹೊಸ, ಆದರೆ ಆತಂಕಕಾರಿ ಬೆಳವಣಿಗೆ ಬಗ್ಗೆ ಮಾಹಿತಿ ಸಿಕ್ಕಿದೆ. 2008ರ ಅಹಮದಾಬಾದ್ ಸರಣಿ ಸ್ಫೋಟ ಮತ್ತು 2007ರ ಗೋರಖ್ಪುರ ಸ್ಫೋಟ ಪ್ರಕರಣಗಳ ಮುಖ್ಯ ಆರೋಪಿಯೂ ಇದರಲ್ಲಿ ಲಿಂಕ್ ಇರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.
ಇಂಡಿಯನ್ ಮುಜಾಹಿದ್ದೀನ್ (IM) ಜಾಲದ ಸದಸ್ಯ ಮಿರ್ಜಾ ಶಾದಾಬ್ ಬೇಗ್ ಕೂಡ ಹರಿಯಾಣದ ಫರಿದಾಬಾದ್ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ (ಆಗಿನ ಅಲ್ ಫಲಾಹ್ ಎಂಜಿನಿಯರಿಂಗ್ ಕಾಲೇಜು) ಹಳೆಯ ವಿದ್ಯಾರ್ಥಿಯಾಗಿದ್ದಾನೆ ಎಂಬ ಸತ್ಯ ಬಯಲಾಗಿದೆ.
ಎರಡು ದಶಕಗಳಿಂದ ತಲೆಮರೆಯಲ್ಲಿರುವ ಆರೋಪಿಮಿರ್ಜಾ ಶಾದಾಬ್ ಬೇಗ್ ಮೇಲೆ ದೇಶಾದ್ಯಂತ ಐದು ಭೀಕರ ಸ್ಫೋಟಗಳ ಆರೋಪವಿದೆ. 2007ರಿಂದಲೇ ತಲೆಮರೆಸಿಕೊಂಡಿರುವ ಬೇಗ್ ಇಂಡಿಯನ್ ಮುಜಾಹಿದ್ದೀನ್ನ ಮುಖ್ಯ ಸದಸ್ಯ ಮತ್ತು ಐಇಡಿ (ಇಂಪ್ರೂವ್ಡ್ ಎಕ್ಸ್ಪ್ಲೋಸಿವ್ ಡಿವೈಸ್) ತಜ್ಞ ಎಂದು ಪೊಲೀಸರು ಹೇಳುತ್ತಾರೆ. ಎನ್ಐಎ ಅವನ ತಲೆಗೆ 15 ಲಕ್ಷ ರೂ. ಬಹುಮಾನವೂ ಘೋಷಿಸಿದೆ.


