‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದ ಬಾ ಬಾ ಕನ್ನಡಿಗ, ಎಳೆ ಜೀವ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಕೆಎಸ್‌ಎಸ್‌ಎ ಸಂಘದ ಅಧ್ಯಕ್ಷ ಎನ್.ಸಿ.ಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಆನಂತರ ವೀರಲೋಕ ಪ್ರಕಾಶನ ಸಂಸ್ಥೆ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಸುತ್ತಿದ್ದ ಪುಸ್ತಕ ಸಂತೆಯ ವೇದಿಕೆಯಲ್ಲಿ ಶಿಕ್ಷಣ ಮಂತ್ರಿಗಳಾದ ಮಧುಬಂಗಾರಪ್ಪನವರ ಹಾರೈಕೆಗಳೊಂದಿಗೆ ಲೋಕಾರ್ಪಣೆಗೊಂಡಿತು. ಸಚಿವರು ಆಸಕ್ತಿಯಿಂದ ಕಥೆ ಕೇಳಿ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಇರುವುದರಿಂದ ಚಿತ್ರವನ್ನು ನೋಡಲೇಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ರಾಜೇಂದ್ರಸಿಂಗ್‌ಬಾಬು ಇತರರು ಹಾಜರಿದ್ದರು.
ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ಪೂಜ್ಯಾಯ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ,ಸಂಭಾಷಣೆ,
ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ ನಿರ್ವಹಿಸಿದ್ದಾರೆ. ಕ್ರಿಷಿ ಸಂಸ್ಥೆಯ ವೆಂಕಟ್‌ಗೌಡ ಕ್ರಿಯೇಟೀವ್ ಹೆಡ್ ಆಗಿರುತ್ತಾರೆ.
ಕನ್ನಡ ಪರ ಹೋರಾಟಗಾರನಾಗಿ ರೋಹಿತ್ ರಾಘವೇಂದ್ರ ನಾಯಕ. ಶಿಕ್ಷಕರಾಗಿ ಸಿಹಿಕಹಿಚಂದ್ರು, ಟೈಟಲ್ ರೋಲ್‌ದಲ್ಲಿ ಕು.ಯಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮೊದಲಬಾರಿ ಖಳನಾಗಿ ಕಾಣಿಸಿಕೊಂಡರೆ, ಇನ್ಸ್‌ಪೆಕ್ಟರ್ ಆಗಿ ಅಶ್ವಿನ್‌ಹಾಸನ್. ಉಳಿದಂತೆ ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯಸುನಿಲ್, ಎಂ.ಜೆ.ರಂಗಸ್ವಾಮಿ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಎಂ.ಬಿ.ಹಳ್ಳಿಕಟ್ಟಿ, ಸಂಕಲನ ಸುಜಿತ್‌ನಾಯಕ್, ವಾದ್ಯ ಸಂಯೋಜನೆ ಕೆ.ಎಂ.ಇಂದ್ರ, ನೃತ್ಯ ಕಂಬಿರಾಜ್, ಕಾರ್ಯಕಾರಿ ನಿರ್ಮಾಪಕರು ರಾಘವ್‌ಸೂರ್ಯ-ದರ್ಶನ್‌ಗೌಡ.
ನಿರ್ದೇಶಕರು ಮಾತನಾಡಿ “ಭಾರತಿ ಎನ್ನುವ ಏಳನೇ ತರಗತಿ ವಿದ್ಯಾರ್ಥಿಯೊಬ್ಬಳು ಟೀಚರ್ ಕನಸನ್ನು ಹೇಗೆ ನನಸು ಮಾಡುತ್ತಾಳೆ. ಇದು ಮುಂದಕ್ಕೆ ಕರ್ನಾಟಕದಲ್ಲಿ ಕನ್ನಡ ಹಾಗೂ ಶಿಕ್ಷಣ ಎಷ್ಟು ಮುಖ್ಯವಾಗುತ್ತೆ. ಜತೆಗೆ ಆ ವಿದ್ಯಾರ್ಥಿನಿ ತನ್ನ ಹಾಗೆ ಲಕ್ಷಾಂತರ ಮಕ್ಕಳು ಕನಿಷ್ಟ ಹತ್ತು ಜನರಿಗೆ ಕನ್ನಡ ಕಲಿಸಬೇಕೆನ್ನುವುದಕ್ಕೊಂದು ಯೋಜನೆ ಬೇಕು. ಇವರೆಡು ಅಂಶಗಳನ್ನು ಕ್ಲೈಮಾಕ್ಸ್‌ದಲ್ಲಿ ಹೇಳಲಾಗಿದೆ. ಚಿತ್ರವು ಕನ್ನಡ ಕಾಳಜಿಯ ಕಥೆಯಾಗಿದೆ. ಹಾಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಆದಿತ್ಯ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇವರೆಡು ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು” ಎಂದು ಎಂ.ಎಲ್.ಪ್ರಸನ್ನ ಮಾಹಿತಿ ನೀಡಿದರು.
ವೆಂಕಟ್‌ಗೌಡ ಸಾರಥ್ಯದಲ್ಲಿ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.


