ಉಡುಪಿ, ನವೆಂಬರ್ 19: ಕಾರ್ಕಳದ ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಯ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಜನಿವಾರ ತೆಗೆಯುವಂತೆ ಹೇಳಿದ್ದಲ್ಲದೆ ಬಸ್ಕಿ ಹೊಡೆಸಿರುವ ಘಟನೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಕ ಮತ್ತು ಪೋಷಕರ ನಡುವಿನ ವಿವಾದದ ವೀಡಿಯೋ ವೈರಲ್ ಆಗಿದ್ದು, ಶಿಕ್ಷಕನನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿಗಳು ಧರಿಸಿದ್ದ ಜನಿವಾರ ಮತ್ತು ಕೈಗೆ ಕಟ್ಟುವ ದಾರಗಳ ಬಗ್ಗೆ ಪ್ರಶ್ನಿಸಿದ್ದ ಅತಿಥಿ ಶಿಕ್ಷಕ ಮದರಶಾ ಎಸ್ ಮಕಂದಾರ್, ಮಕ್ಕಳಿಂದ 200 ಬಸ್ಕಿ ಹೊಡೆಸಿದ್ದ. ಆತನ ಈ ವರ್ತನೆಯಿಂದ ನೊಂದ ಮಕ್ಕಳು ಶಾಲೆಯ ಪ್ರಾಂಶುಪಾಲರಿಗೆ ಈ ಬಗ್ಗೆ ದೂರು ನೀಡಿದ್ದರು. ನಂತರ ಈ ಘಟನೆಯನ್ನರಿತ ಪಾಲಕರು ಮತ್ತು ಗ್ರಾಮಸ್ಥರು ಶಾಲೆಯ ಮುಂದೆ ಜಮಾಯಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಶಿಕ್ಷಕನ ದುರ್ವರ್ತನೆಯ ಕುರಿತು ಪ್ರಶ್ನೆ ಮಾಡಿದ್ದ ಪಾಲಕರು ಮತ್ತು ಶಿಕ್ಷಕ ನಡುವಿನ ಈ ಗಲಾಟೆಯ ವೀಡಿಯೋ ವೈರಲ್ ಆಗಿತ್ತು. ಮಾತುಕತೆ ವೇಳೆ ಶಿಕ್ಷಕ ತಾನು ಮಾಡಿದ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಆಡಳಿತ ಮಂಡಳಿ ಶಿಕ್ಷಕ ಮದರಶಾನನ್ನು ಕೆಲಸದಿಂತ ಕಿತ್ತು ಹಾಕಿದೆ.


